ಬೆಳಗಾವಿ 13- ಪರಿಶ್ರಮ, ಶ್ರದ್ಧೆ, ಪ್ರಾಮಾಣಿಕತೆಯನ್ನು ವಿದ್ಯಾರ್ಥಿಗಳು ಬೆಳೆಯಿಸಿಕೊಂಡಲ್ಲಿ ಖಂಡಿತವಾಗಿ ಯಶಸ್ಸನ್ನು ಪಡೆಯುವಿರಿ. ಮಾತೃಋಣ, ಪಿತೃಋಣ ಗುರುಋಣ ಜೀವನದಲ್ಲಿ ಈ ಮೂರು ಋಣಗಳು ಅತ್ಯಂತ ಮಹತ್ವದ್ದಾಗಿವೆ. ನಿಮ್ಮ ಸಾಧನೆಯಲ್ಲಿ ಯಶಸ್ವಿಯಾಗುವುದರೊಂದಿಗೆ ಈ ಋಣಗಳನ್ನು ತೀರಿಸಬಹುದಾಗಿಯಾದ್ದರಿಂದ ಇಂದಿನಿಂದಲೇ ನೀವು ನಿಮ್ಮ ಸಾಧನೆಗಳತ್ತ ಮುಖ ಮಾಡಿ ಯಶಸ್ಸನ್ನು ಪಡೆಯಿರಿ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಡಾ. ಜಯಂತ ಕಿತ್ತೂರ ಇಂದಿಲ್ಲಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಹಿಂದವಾಡಿಯಲ್ಲಿರುವ ಐ.ಎಂ.ಇ.ಆರ್. ಸಭಾಭವನದಲ್ಲಿ ದಿ. 13 ರವಿವಾರದಂದು ಬೆಳಗಾವಿ ಜಿಲ್ಲಾ ಅಖಿಲ ಬ್ರಾಹ್ಮಣ ಸಮಾಜ ಸಂಘಟನೆಯವರು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಎಸ್.ಎಸ್.ಎಲ್.ಸಿ. ಯಲ್ಲಿ ಪ್ರತಿಶತ 95 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಪ್ರಮಾಣಪತ್ತ ನಗದು ಹಣ ನೀಡಿ ಗೌರವಿಸುವ ಈ ಕಾರ್ಯಕ್ರಮದಲ್ಲಿ ಡಾ. ಕಿತ್ತೂರ ಅವರು ಮೇಲಿನಂತೆ ಅಭಿಪ್ರಾಯ ಪಟ್ಟರು.
ಮುಂದೆ ಮಾತನಾಡುತ್ತ ಡಾ. ಕಿತ್ತೂರ ಅವರು.ಪ್ರಾಮಾಣಿಕತೆಗೆ ಮತ್ತೊಂದು ಹೆಸರೆಂದರೆ ಬ್ರಾಹ್ಮಣರು. ಬ್ರಾಹ್ಮಣರೊಂದಿಗೆ ಯಾವುದೇ ಸಮಾಜದವರು ವ್ಯವಹಾರ ಮಾಡಬೇಕಾದ ಸಂದರ್ಭದಲ್ಲಿ ಹೆಚ್ಚು ವಿಚಾರ ಮಾಡದೇ ಒಪ್ಪಿಕೊಂಡು ಬಿಡುತ್ತಾರೆ. ಏಕೆಂದರೆ ಇವರು ಯಾರಿಗೂ ಮೋಸಮಾಡುವವರಲ್ಲ. ಪ್ರಾಮಾಣಿಕರೆಂದು ಹೆಸರಾಗಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಎಸ್. ಎಂ. ಕುಲಕರ್ಣಿಯವರು ಮಾತನಾಡುತ್ತ, ಋಗ್ವೇದಿ ಬ್ರಾಹ್ಮಣರು, ಕರಾಡೆ ಬ್ರಾಹ್ಮಣರು, ವೈಷ್ಣವ, ಸ್ಮಾರ್ತ ಹೀಗೆ ಬೇರೆ ಗುಂಪುಗಳಾಗಿ ಬ್ರಾಹ್ಮಣರು ಹರಿದೆ ಹಂಚಿ ಹೋಗಿದ್ದರು. ಈ ಒಡಕಿಂದ ಬೇರೆ ಸಮಾಜದವರ ಟೀಕೆಗೆ ಗುರಿಯಾಗಬೇಕಾಗಿತ್ತು. ಈಗ ಎಲ್ಲರೂ ಒಂದೇ ವೇದಿಕೆಯಲ್ಲಿ ಸೇರುತ್ತಿರುವುದು ಸಂತೋಷವನ್ನು ಮಾಡುತ್ತಲಿದೆ ಎಂದು ಹೇಳಿದ ಅವರು ಎಲ್ಲ ಬ್ರಾಹ್ಮರನ್ನು ಒಂದೆಡೆ ಸೇರಿಸಲು ತಾವು ಪಟ್ಟ ಕಷ್ಟವನ್ನು ಹಂಚಿಕೊಂಡರು.
ಪ್ರತಿಶತ 95 ಕ್ಕಿಂತ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಾದ ಅನ್ವಿತಾ ಅಭಿಜೀತ್ ತಳಗೇರಿ, ಶ್ರೀಯಾ ಸುಭಾಸ ತಿಗಡಿಕರ, ಶ್ರೀಜಾ ರವಿ ಗುಮಾಸ್ತೆ, ಆಕಾಶ ಅನಂತ ಕುಲಕರ್ಣಿ, ಗಿರಿಧರ ಶ್ರೀಕಾಂತ ಗುಣಾರಿ, ಸಾರಾ ನರಸಿಂಹ ಆಯಾಚಿತ, ಪ್ರಜ್ಞಾ ಕೇಶವ ಕುಲಕರ್ಣಿ, ಶ್ರೇಯಾ ಅನಿಲ ಇನಾಮದಾರ, ದಿಗ್ವಿಜಯ ಶಶಿಧರ ಬೈಲೂರ, ಚಿನ್ಮಯ ಗೋವಿಂದ ಕೇಳಕರ, ಶ್ರೇಯಾ ಅನಿರುದ್ಧ ಪರ್ವತಿಕರ, ಶ್ರೀಷ ಸಂತೋಷ ಚಿಟ್ನಿಸ, ಅದಿತಿ ಆರ್. ಮುತಾಲಿಕದೇಸಾಯಿ, ನಿಧಿ ಶ್ರೀಪಾದ ಜೋಶಿ, ರಮ್ಯಾ ಜಿ. ಭಟ್, ಹರೀಷ ಜಗದೀಶ ಕುಲಕರ್ಣಿ ಇವರನ್ನು ಪ್ರಮಾಣಪತ್ರ ಹಾಗೂ ನಗದು ಬಹುಮಾನ ಕೊಟ್ಟು ಗೌರವಿಸಲಾಯಿತು.
ಸಂಗ್ರಾಮ ಕುಲಕರ್ಣಿ ಇವರು ಗಾಯತ್ರಿ ವಸತಿ ಗೃಹ ಕುರಿತಾದ ಸ್ಥಿತಿಗತಿಯನ್ನು ವಿವರಿಸಿ, ಇನ್ನು ಕಟ್ಟಡ ಕಾರ್ಯವಿದ್ದು ಅದಕ್ಕೆ ತನು ಮನ ಧನದಿಂದ ಸಹಾಯ ಮಾಡುವಂತೆ ವಿನಂತಿಸಿಕೊಂಡರು.
ತಿಳವೆ ಉಪಸ್ಥಿತರಿದ್ದರು. ವಾಸದೇವ ಜೋಶಿ ಅವರ ವೇದಘೋಷದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಧನಲಕ್ಷ್ಮೀ ಪಾಟೀಲ ಮತ್ತು ಮಘನಾ ಕುಲಕರ್ಣಿ ಪ್ರಾರ್ಥಿಸಿದರು. ಕಾರ್ಯದರ್ಶಿ ಆರ್. ಎಸ್. ಮುತಾಲಿಕ ಸ್ವಾಗತಿಸಿದರು. ಶ್ರೀನಿವಾಸ ಕಾನಿಟ್ಕರ್ ವಂದಿಸಿದರು. ಅರವಿಂದ ಹುನಗುಂದ ನಿರೂಪಿಸಿದರು.
-0-0-0-
ಫೋಟೋ: ವೇದಿಕೆ ಮೇಲೆ ಅತಿಥಿಗಳೊಂದಿಗೆ ಸನ್ಮಾನಿತ ವಿದ್ಯಾರ್ಥಿ,ವಿದ್ಯಾರ್ಥಿನಿಯವರು