ಮೈಸೂರು, ಸೆಪ್ಟೆಂಬರ್ 15: ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ ಆಯ್ಕೆಗೆ ವಿರೋಧ ವ್ಯಕ್ತಪಡಿಸಿ ಬಿಜೆಪಿ ನಾಯಕ ಪ್ರತಾಪ್ ಸಿಂಹ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಸೋಮವಾರ ವಜಾಗೊಳಿಸಿದೆ. ಅರ್ಜಿಯ ವಿಚಾರಣೆ ನಡೆಸಿದ ಸಿಜೆ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿಎಂ ಜೋಶಿ ಅವರಿದ್ದ ಪೀಠ, ದಸರಾ ಉದ್ಘಾಟನೆ ವಿಚಾರದಲ್ಲಿ ಯಾವುದೇ ಹಕ್ಕು ಉಲ್ಲಂಘನೆ ಆಗಿರುವುದು ಕಂಡುಬಂದಿಲ್ಲ, ಹೀಗಾಗಿ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದಿದೆ.
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆಗೆ ವಿರೋಧ; ಪ್ರತಾಪ್ ಸಿಂಹ ಪಿಐಎಲ್ ವಜಾ

ಬಾನು ಮುಷ್ತಾಕ್ ಅವರನ್ನು ಉದ್ಘಾಟನೆಗೆ ಆಹ್ವಾನಿಸಿದ್ದು ಸರಿಯಲ್ಲ. ಅವರು ಹಿಂದೂ ವಿರೋಧಿ, ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪರ ವಕೀಲ ಸುದರ್ಶನ್ ವಾದ ಮಂಡಿಸಿದರು. ಭುವನೇಶ್ವರಿ, ಕನ್ನಡ ಬಾವುಟದ ಬಗ್ಗೆ ಮುಷ್ತಾಕ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದ ವಕೀಲರು, ಬಾನು ಮುಷ್ತಾಕ್ ನೀಡಿದ ಹೇಳಿಕೆಯ ಇಂಗ್ಲಿಷ್ ಅನುವಾದ ಸಲ್ಲಿಕೆ ಮಾಡಿದರು.