ಬಳ್ಳಾರಿ:ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಸಿಇಟಿ ಪರೀಕ್ಷೆ ಬರೆಯುತ್ತಿದ್ದ ಬ್ರಾಹ್ಮಣ ವಿದ್ಯಾರ್ಥಿಯೊಬ್ಬರ ತಪಾಸಣೆ ನೆಪದಲ್ಲಿ ಯಜ್ಞೋಪವೀತ ಜಾನುವಾರವನ್ನು ಪರೀಕ್ಷಾಧಿಕಾರಿಗಳು ಕಿತ್ತುಹಾಕಿದ ಕ್ರಮ ಅತ್ಯಂತ ಖಂಡನೀಯ, ಕೂಡಲೇ ಈ ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ, ಜಿಲ್ಲಾಧ್ಯಕ್ಷ ಡಾ.ಡಿ.ಶ್ರೀನಾಥ್, ಬ್ರಾಹ್ಮಣ ಒಕ್ಕೂಟದ ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್ ಅವರು ಒತ್ತಾಯಿಸಿದ್ದಾರೆ. ಈ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೂಡಲೇ ಸರ್ಕಾರ ಈ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಸೇವೆಯಿಂದ ಅಮಾನತ್ತುಗೊಳಿಸಬೇಕು, ಜನಿವಾರ ಕಿತ್ತೆಸೆದ ಅಧಿಕಾರಿಗಳು ಯಾರೇ ಇರಲಿ ಕೂಡಲೇ ಕ್ಷಮೆಯಾಚಿಸಬೇಕು, ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ನಿರ್ಲಕ್ಷ್ಯ ವಹಿಸಿದರೆ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.
ಅದರಂತೆ ಬೀದರ ಜಿಲ್ಲೆಯಲ್ಲಿ ಸಾಯಿ ಸ್ಫೂರ್ತಿ ಪರೀಕ್ಷಾ ಕೇಂದ್ರದಲ್ಲಿ ಅಧಿಕಾರಿಗಳು ತಪಾಸಣೆ ಮಾಡುವ ವೇಳೆ ಜನಿವಾರ ಕಿತ್ತು ಹಾಕುವಂತೆ ಸೂಚಿಸಿದ್ದು, ಅತ್ಯಂತ ಖಂಡನೀಯ. ಪರೀಕ್ಷಾ ಕೇಂದ್ರಗಳ ಅಧಿಕಾರಿಗಳಿಗೆ ಕನಿಷ್ಠ ಜ್ಞಾನವು ಇಲ್ಲದಾಗಿದೆ, ಪರೀಕ್ಷಾ ಮಂಡಳಿ ತಪಾಸಣೆ ವೇಳೆ ಯಾವ ವಸ್ತುಗಳನ್ನು ವಶಕ್ಕೆ ಪಡೆಯಬೇಕು, ಮುಂಜಾಗೃತಕ್ರಮವಾಗಿ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ತರಬೇತಿ ನೀಡಿದ್ದಾರೆ, ಶಿವಮೊಗ್ಗ ಹಾಗೂ ಬೀದರ್ ಜಿಲ್ಲೆಯಲ್ಲಿ ಅಧಿಕಾರಿಗಳು ಈ ರೀತಿ ನಡೆದುಕೊಂಡಿರುವುದು ಇಡಿ ಹಿಂದೂ ಸಮಾಜಕ್ಕೆ ಮಾಡಿದ ಅಪಮಾನವಾಗಿದೆ. ಬೀದರ್ ಜಿಲ್ಲೆಯ ಕೇಂದ್ರದಲ್ಲಿ ನಮ್ಮ ಬ್ರಾಹ್ಮಣ ವಿದ್ಯಾರ್ಥಿ ಜನಿವಾರ ತೆಗೆಯಲು ನಿರಾಕರಿಸಿದ್ದು, ಅಧಿಕಾರಿಗಳು, ಸಿಬ್ಬಂದಿಗಳು ಪರೀಕ್ಷೆ ಬರೆಯಲು ಅನುಮತಿ ನೀಡಿಲ್ಲ, ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದ ವಿದ್ಯಾರ್ಥಿ ಗಣಿತ ಪರೀಕ್ಷೆಯಿಂದ ಹೊರಗುಳಿದಿದ್ದಾರೆ. ಬುಧವಾರ ರಸಾಯನ ಶಸ್ತ್ರ, ಭೌತಶಾಸ್ತ್ರ ಪರೀಕ್ಷೆಯನ್ನು ಜನಿವಾರ ಧರಿಸಿಯೇ ಬರೆದಿದ್ದು, ಗುರುವಾರ ಗಣಿತ ಪರೀಕ್ಷೆ ನಡೆಯುವ ವೇಳೆ, ಪರೀಕ್ಷಾ ಸಿಬ್ಬಂದಿ ಜನಿವಾರ ಗಮನಿಸಿ, ತೆಗೆಯುವಂತೆ ಆಕ್ಷೇಪ ಮಾಡಿದ್ದಾರೆ, ವಿದ್ಯಾರ್ಥಿ ತೆಗೆಯೊಲ್ಲ ಎಂದು ಎಸ್ಟೇ ಅಂಗಲಾಚಿ ಬೇಡಿದರು, ಒಪ್ಪದ ಸಿಬ್ಬಂದಿಗಳು ಅವಕಾಶ ಕಲ್ಪಿಸಿಲ್ಲ. ಇoಜಿಯರಿಂಗ್ ಆಗುವ ಕನಸು ಕಂಡಿದ್ದ ವಿದ್ಯಾರ್ಥಿಯ ಕನಸು ನುಚ್ಚು ನೂರಾಗಿದೆ. ಕೂಡಲೇ ಎರಡೂ ಜಿಲ್ಲೆಯಲ್ಲಿ ಈ ಘಟನೆಗೆ ಕಾರಣರಾದ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕು, ಸರ್ಕಾರ ಕೂಡಲೇ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.