ಬಾಗಲಕೋಟೆ ೨೪.-ಗಣರಾಜ್ಯೋತ್ಸವ ಅಂಗವಾಗಿ ಪ್ರತಿವರ್ಷ ಆಕಾಶವಾಣಿ ಹಮ್ಮಿಕೊಳ್ಳುವ ರಾಷ್ಟ್ರೀಯ ಬಹುಭಾಷಾ ಕವಿ ಸಮ್ಮೇಳನಕ್ಕೆ ಈ ಬಾರಿ ನಗರದ ಕವಿ ಡಾ.ಪ್ರಕಾಶ ಗ.ಖಾಡೆ ಆಯ್ಕೆಯಾಗಿದ್ದಾರೆ. ಜನೆವರಿ ೨೫ ರವಿವಾರ ಗಣರಾಜ್ಯೋತ್ಸವ ಮುನ್ನಾದಿನದಂದು ರಾಜ್ಯದ ಎಲ್ಲಾ ಬಾನುಲಿ ಕೇಂದ್ರಗಳಿಂದ ರಾತ್ರಿ ೧೦ ಗಂಟೆಗೆ ಕವಿ ಸಮ್ಮೇಳನ ಪ್ರಸಾರವಾಗಲಿದೆ. ಬೆಂಗಾಲಿ ಕವಿ ಸೌಮಿತ್ ಬಸು ಅವರ ಬೆಂಗಾಲಿ ಕವಿತೆಯ ಕನ್ನಡ ಅನುವಾದವನ್ನು ಡಾ.ಪ್ರಕಾಶ ಖಾಡೆ ವಾಚನ ಮಾಡಲಿದ್ದಾರೆ. ಭಾಷಾ ಬಾಂಧವ್ಯದ ಮೂಲಕ ರಾಷ್ಟ್ರೀಯ ಭಾವೈಕ್ಯತೆಯ ಘನ ಉದ್ದೇಶವನ್ನು ಹೊಂದಿರುವ ಈ ಕವಿ ಸಮ್ಮೇಳನದಲ್ಲಿ ದೇಶದ ಬೇರೆ ಬೇರೆ ರಾಜ್ಯಗಳ ಕವಿಗಳು ತಮ್ಮ ಭಾಷೆಯಲ್ಲಿ ಕವಿತೆ ವಾಚಿಸುತ್ತಾರೆ, ಹೀಗೆ ವಾಚಿಸಿದ ಸಂಸ್ಕೃತ, ಆಸ್ಸಾಮಿ, ಬೆಂಗಾಲಿ, ಗುಜರಾತಿ, ಮರಾಠಿ, ಕಾಶ್ಮೀರಿ, ತೆಲಗು, ತಮಿಳು, ಮಲಯಾಳಂ, ಪಂಜಾಬಿ, ಸಿಂಧಿ, ಕೊಂಕಣಿ ಈ ಮೊದಲಾದ ಭಾಷೆಗಳಲ್ಲಿ ಅಲ್ಲಿನ ಕವಿಗಳು ಓದಿದ ಕವಿತೆಗಳನ್ನು ಕನ್ನಡದ ಕವಿಗಳು ಅನುವಾದ ಮಾಡಿ ವಾಚಿಸಲಿದ್ದು, ಬೆಂಗಾಲಿಯಿಂದ ಕನ್ನಡಕ್ಕೆ ಅನುವಾದಿಸಿದ ಕವಿತೆಯನ್ನು ಡಾ.ಖಾಡೆ ವಾಚಿಸಲಿದ್ದಾರೆ. ಲೇಖಕ, ಕಥೆಗಾರ, ಜಾನಪದ ತಜ್ಞರಾಗಿ ಗುರುತಿಸಿಕೊಂಡಿರುವ ಖಾಡೆಯವರು, ಕವಿಯಾಗಿಯೂ ಹೆಸರಾಗಿದ್ದಾರೆ, ಈ ವರೆಗೆ ಅವರ ಗೀತಚಿಗಿತ, ಸಾಲು ಹನಿಗಳು, ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ, ಶಾಂತಿ ಬೀಜಗಳ ಜತನ ಮೊದಲಾದ ಕವನ ಸಂಕಲನಗಳು ಪ್ರಕಟವಾಗಿವೆ. ಕವಿ ಖಾಡೆ ಅವರನ್ನು ಆಕಾಶವಾಣಿ ಧಾರವಾಡ ಕೇಂದ್ರದ ನಿರ್ದೇಶಕರಾದ ಶರಣಬಸವ ಚೋಳಿನ ಅಭಿನಂದಿಸಿದ್ದಾರೆ.


