ಹಾಸನ03: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡ (SIT) ಬೆಂಗಳೂರು ಮತ್ತು ಹಾಸನದ ಮನೆ ಮತ್ತು ಫಾರ್ಮ್ ಹೌಸಗಳಲ್ಲಿ ದಾಳಿ ಮಾಡಿ ಸಾಕ್ಷ್ಯಾಧಾರಗಳನ್ನು ಕಲೆಹಾಕಿದೆ.
ಲೈಂಗಿಕ ದೌರ್ಜನ್ಯ ಪ್ರಕರಣದ ತೀವ್ರ ಕಾರ್ಯಾಚರಣೆಗೆ ಇಳಿದಿರುವ ವಿಶೇಷ ತನಿಖಾ ತಂಡ (SIT) ಎಚ್ ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಇಬ್ಬರ ಬೆಂಗಳೂರು ಹಾಗೂ ಹಾಸನ ಜಿಲ್ಲೆಯ ಮನೆಗಳು ಹಾಗೂ ಫಾರಂ ಹೌಸ್‌ಗಳಿಗೆ ದಾಳಿ ನಡೆಸಿ ತೀವ್ರ ತಪಾಸಣೆ ನಡೆಸಿದೆ.
ಇಂದು ಬೆಳ್ಳಂಬೆಳಿಗ್ಗೆ ಪ್ರಜ್ವಲ್ ತೋಟದ ಮನೆಗೆ ಎಸ್ಐಟಿ ಅಧಿಕಾರಿಗಳ ತಂಡ ರೇಡ್ ಮಾಡಿದ್ದು, ಐದು ಜನರ ತಂಡದಿಂದ ಹಾಸನ ಪಡುವಲಹಿಪ್ಪೆಯ ತೋಟದ ಮನೆಯಲ್ಲಿ ಪರಿಶೀಲನೆ ನಡೆದಿದೆ. ಮುಂಜಾನೆ 3.30ರ ಸುಮಾರಿನಲ್ಲೇ ಬಂದು ಪರಿಶೀಲನೆ ನಡೆಸಿರುವ ಬಗ್ಗೆ ಮಾಹಿತಿ ಇದೆ.
ನಿನ್ನೆ ತಡರಾತ್ರಿ ಬೆಂಗಳೂರಿನ ಬಸವನಗುಡಿಯಲ್ಲಿರುವ ಮನೆ, ಹೊಳೆನರಸೀಪುರದ ಪಡುವಲಹಿಪ್ಪೆಯ ಫಾರ್ಮ್ ಹೌಸ್, ಸೂರಜ್ ರೇವಣ್ಣಗೆ ಸೇರಿದ ಗನ್ನಿಕಡದಲ್ಲಿರುವ ಫಾರ್ಮ್ ಹೌಸ್ ಮೇಲೆ ಹೀಗೆ ಒಟ್ಟು ಮೂರು ಕಡೆ SIT ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು 30ಕ್ಕೂ ಅಧಿಕ ಅಧಿಕಾರಿಗಳು, ಸಿಬ್ಬಂದಿ ಏಕಕಾಲಕ್ಕೆ ದಾಳಿ ಮಾಡಿದ್ದು, ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಎಸ್‌ಪಿ ಸೀಮಾ ಲಾಠ್ಕರ್ ನೇತೃತ್ವದಲ್ಲಿ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಪ್ರಜ್ವಲ್ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗುತ್ತಲೇ ಹಾಸನಕ್ಕೆ ಬಂದಿರುವ ಪೊಲೀಸರ ಎರಡು ತಂಡ, ಪಡುವಲಹಿಪ್ಪೆ ಸೇರಿ ಎರಡು ಕಡೆ ಸ್ಥಳ ಪರಿಶೀಲನೆ ನಡೆಸಿದೆ. ಇಂದು ಹೊಳೆನರಸೀಪುರದ ರೇವಣ್ಣ ನಿವಾಸ ಹಾಗು ಹಾಸನದ ಪ್ರಜ್ವಲ್ ನಿವಾಸದಲ್ಲೂ ಪರಿಶೀಲನೆ ನಡೆಸಿ ಸ್ಥಳ ಮಹಜರು ಮಾಡುವ ಸಾಧ್ಯತೆ ಇದೆ. ಕೃತ್ಯ ನಡೆದಿದೆ ಎನ್ನಲಾಗುತ್ತಿರುವ ಹಲವು ಸ್ಥಳಗಳಲ್ಲಿ ಎಸ್‌ಐಟಿ ತನಿಖೆ ನಡೆಸಬೇಕಿದೆ. ಹೀಗಾಗಿ ಹಾಸನದ ಆರ್‌ಸಿ ರಸ್ತೆಯ ಸಂಸದರ ನಿವಾಸ ಹಾಗು ಹೊಳೆನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆಯ ತೋಟದ ಮನೆಯನ್ನು ಎಸ್ಐಟಿ ವಶಕ್ಕೆ ಪಡೆಯುವ ಸಂಭವ ಇದೆ.