ಬೆಂಗಳೂರು, ಮೇ 03: ರಾಜ್ಯಾದ್ಯಂತ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಹಲ್ ಚಲ್ ಎಬ್ಬಿಸಿದ್ದು ಇದೀಗ ಸಿಐಡಿಗೂ ದೂರು ದಾಖಲಾಗಿದೆ. ಪ್ರಜ್ವಲ್ ರೇವಣ್ಣರಿಂದ ದೌರ್ಜನ್ಯವಾಗಿದೆ ಎಂದು ಆರೋಪಿಸಿದ್ದ ಮಹಿಳೆಯ ಪತಿ ಇದೀಗ ಅಪರಾಧ ತನಿಖಾ ಇಲಾಖೆಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಎ1 ಆಗಿದ್ದಾರೆ.
ಕಾಲೇಜು ವಿದ್ಯಾರ್ಥಿನಿಯರಿಗೆ ಬಿಸಿಎಂ ಹಾಸ್ಟೇಲ್ ಸೀಟ್ ಕೊಡಿಸಿ ಅಂತ 2021ರಲ್ಲಿ ಸಂತ್ರಸ್ತೆ ಪ್ರಜ್ವಲ್ ರೇವಣ್ಣ ಅವರನ್ನು ಎಂಪಿ ಕ್ವಾಟರ್ಸ್ನಲ್ಲಿ ಭೇಟಿಯಾಗಲು ತೆರಳಿದ್ದರು. ಈ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಮಹಿಳೆಯನ್ನು ಕ್ವಾಟರ್ಸ್ನ ಮಹಡಿ ಮೇಲೆ ಕಳುಹಿಸಿದ್ದಾರೆ. ಬಳಿಕ ಪ್ರಜ್ವಲ್ ರೇವಣ್ಣ ತಮ್ಮ ಬಳಿ ಸಮಸ್ಯೆ ಹೇಳಿಕೊಂಡು ಬಂದಿದ್ದ ಸಾರ್ವಜನಿಕರನ್ನು ಮಾತನಾಡಿಸಿ ಕಳುಹಿಸಿದ್ದಾರೆ. ಕೊನೆಗೆ ಸಂತ್ರಸ್ತೆ ಮಹಿಳೆ ಭೇಟಿಯಾಗಲು ಮಹಡಿ ಮೇಲೆ ಹೋಗಿದ್ದಾರೆ. ಅಲ್ಲಿ ಪ್ರಜ್ವಲ್ ರೇವಣ್ಣ ಮಹಿಳೆಯನ್ನು ಕೊಠಡಿಯೊಂದರ ಒಳಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ. ಅಲ್ಲದೆ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ.
ಬಳಿಕ ಈ ವಿಡಿಯೋವನ್ನು ಇಟ್ಟುಕೊಂಡು ಮಹಿಳೆಗೆ ಬ್ಲಾಕ್ ಮೇಲ್ ಮಾಡಿದ್ದಾರೆ. ಅಲ್ಲದೆ ಮಹಿಳೆಗೆ ಪದೇ ಪದೇ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರವೆಸಗಿದ್ದಾರೆ ಎಂದು ಸಂತ್ರಸ್ತೆಯ ಪತಿ ದೂರಿನಲ್ಲಿ ದಾಖಲಿಸಿದ್ದಾರೆ.
ತಮ್ಮ ಮನೆಯ ಮಹಿಳಾ ಕೆಲಸದಾಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಹೊಳೆನರಸೀಪುರ ಠಾಣೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ ಹಾಸನ ಮೂಲದ ಮಹಿಳೆ ಪ್ರಜ್ವಲ್ ರೇವಣ್ಣ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಎಸ್ಐಟಿಗೆ ಹೇಳಿಕೆ ನೀಡಿದ್ದರು. ಎಸ್ಐಟಿ ಹೇಳಿಕೆ ಆಧರಿಸಿ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದೆ.ಇದರ ಬೆನ್ನಲೇ ಇದೀಗ ಸಂತ್ರಸ್ತೆ ಪತಿ ಸಿಐಡಿಗೆ ದೂರು ನೀಡಿದ್ದು, ಪ್ರಜ್ವಲ್ ರೇವಣ್ಣಗೆ ಸಂಕಷ್ಟ ಜಾಸ್ತಿಯಾಗಿದೆ.
ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ತಂದೆ-ಮಗನಿಗೆ ಎಸ್ಐಟಿ ನೋಟಿಸ್ ನೀಡಿದೆ. ಆದರೆ ಎಸ್ಐಟಿ ವಿಚಾರಣೆಗೆ ಹಾಜರಾಗದೆ ಕಾಲಾವಕಾಶ ಕೋರಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಎರಡನೇ ದೂರು ದಾಖಲಾಗಿರುವುದು ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ತೆಲೆನೋವಾಗಿದೆ.
ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸಲಾಗುವುದು ಎಂದು ಗೃಹ ಸಚಿವ ಜಿ ಪರಮೇಶ್ವರ ಗುರುವಾರವೇ ತಿಳಿಸಿದ್ದಾರೆ. ಈ ಮಧ್ಯೆ, ಪ್ರಜ್ವಲ್ ರೇವಣ್ಣ ಯಾವ ದೇಶದಲ್ಲಿದ್ದರೂ ಅವರನ್ನು ಕರೆತಂದು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.