ಪ್ರಜ್ವಲ್‌ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದತಿ ಪ್ರಕ್ರಿಯೆ ಆರಂಭ

Ravi Talawar
ಪ್ರಜ್ವಲ್‌ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದತಿ ಪ್ರಕ್ರಿಯೆ ಆರಂಭ
WhatsApp Group Join Now
Telegram Group Join Now

ನವದೆಹಲಿ,22: ಸಂಸದ ಪ್ರಜ್ವಲ್‌ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದತಿ ಪ್ರಕ್ರಿಯೆ ಚಾಲನೆ ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳಿಂದ ತಿಳಿದುಬಂದಿದೆ.

ಕರ್ನಾಟಕ ಸರ್ಕಾರದ ಮನವಿಯ ಬೆನ್ನಲ್ಲೇ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದ್ದು, ಎಸ್‌ಐಟಿಯಿಂದ ಪಾಸ್‌ಪೋರ್ಟ್‌ ರದ್ದತಿ ಮನವಿ ಬಂದಿದೆ. ಹೀಗಾಗಿ ಪಾಸ್‌ಪೋರ್ಟ್‌ ರದ್ದತಿಗೆ ಕ್ರಮ ಕೈಗೊಳ್ಳಲಾಗುವುದು. ಕೆಲವೊಂದು ದಾಖಲೆಗಳ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದೆ.

ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದತಿ ಕೋರಿ ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ 2ನೇ ಬಾರಿ ಪತ್ರ ಬರೆದಿದ್ದರು. ಅಲ್ಲದೆ, ವಿದೇಶಾಂಗ ಸಚಿವಾಲಯ ಮಧ್ಯಪ್ರವೇಶಿಸುವಂತೆಯೂ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ ನೀಡಿದೆ ಎಂದು ತಿಳಿದುಬಂದಿದೆ.

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸೇರಿದ್ದು ಎನ್ನಲಾದ ಲೈಂಗಿಕ ದೌರ್ಜನ್ಯದ ಅನೇಕ ವೀಡಿಯೊಗಳು ಎರಡು ಮೂರು ಪೆನ್‌ಡ್ರೈವ್‌ಗಳಲ್ಲಿ ದೊರೆತ ವಿಚಾರ ರಾಜ್ಯದೆಲ್ಲೆಡೆ ಸುದ್ದಿಗೆ ಗ್ರಾಸವಾಗಿದೆ. ಪ್ರಜ್ವಲ್ ಅವರು ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಇದು ಸುಳ್ಳು ಎಂದು ಪ್ರಜ್ವಲ್‌ ರೇವಣ್ಣ ಪ್ರತಿಕ್ರಿಯಿಸಿದ್ದು, ಪ್ರಸ್ತುತ ವಿದೇಶದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಅವರು ಒತ್ತಾಯಿಸುತ್ತಿದ್ದಾರೆ.

ಈ ನಡುವೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿರುವ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು, ಕೇಂದ್ರ ಸರ್ಕಾರ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಪಾಸ್​ಪೋರ್ಟ್ ರದ್ದತಿಗೆ ಅದರದ್ದೇ ಆದ ಪ್ರಕ್ರಿಯೆಗಳು ಇವೆ. ರಾಜತಾಂತ್ರಿಕ ಪಾಸ್​​ಪೋರ್ಟ್​​ ರದ್ದತಿಗೆ ಕೋರ್ಟ್​​​ನಲ್ಲಿ ಅರ್ಜಿ ಹಾಕಲಾಗಿದೆ. ಕೇಂದ್ರ ಸರ್ಕಾರ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಿದೆ. ಆದರೆ, ನನ್ನ ಪ್ರಶ್ನೆಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಪರಮೇಶ್ವರ್ ಈವರೆಗೆ ಉತ್ತರಿಸಿಲ್ಲ. ಪ್ರಜ್ವಲ್ ಪೆನ್​ಡ್ರೈವ್ ಹೊರಬಂದಿದ್ದು ಏಪ್ರಿಲ್ 21ರಂದು. ಆದರೆ, ಪ್ರಜ್ವಲ್ ವಿದೇಶಕ್ಕೆ ಹೋಗಿದ್ದು ಏಪ್ರಿಲ್ 27ರಂದು. ಹಾಗಾದರೆ ಅಲ್ಲಿಯವರೆಗೆ ಇವರೇನು ಕತ್ತೆ ಕಾಯುತ್ತಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

ವಿದೇಶಕ್ಕೆ ಹೋದವರನ್ನು ಕರೆತರಲು ಪ್ರಕ್ರಿಯೆಗಳಿವೆ. ರಾಜ್ಯ ಸರ್ಕಾರಕ್ಕೆ ಸಹಕಾರ ನೀಡಲು ಕೇಂದ್ರ ತಯಾರಿದೆ. ಪತ್ರ ಬರೆದ ತಕ್ಷಣ ಪಾಸ್​​ಪೋರ್ಟ್​ ರದ್ದಾಗಬೇಕು ಎಂದರೆ ಹೇಗೆ? ಇದೀಗ ಪ್ರಕರಣವನ್ನು ಬಿಜೆಪಿ ಮೇಲೆ ಹಾಕುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ. ಒಕ್ಕಲಿಗ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟು ಚುನಾವಣೆ ಮುಗಿಯುವವರೆಗೂ ಏನೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಗಂಭೀರ ಪ್ರಕರಣ. ಪ್ರಜ್ವಲ್ ವಿಚಾರಣೆ ಎದುರಿಸಬೇಕು. ಅವರು ತಪ್ಪು ಮಾಡಿದ್ದೇ ಆಗಿದ್ದರೆ ಕಠಿಣ ಕ್ರಮ ಆಗಲೇಬೇಕು. ಇದರಲ್ಲಿ ಯಾವುದೇ ಅನುಕಂಪ ಇಲ್ಲವೇ ಇಲ್ಲ. ಆದರೆ, ಪ್ರಜ್ವಲ್ ಪ್ರಕರಣದಲ್ಲಿ ರಾಜ್ಯ ಸರ್ಕಾರ ತನಿಖೆಗಿಂತ ಹೆಚ್ಚು ರಾಜಕಾರಣ ಮಾಡುತ್ತಿದೆ ಎಂದು ಹೇಳಿದರು.

WhatsApp Group Join Now
Telegram Group Join Now
Share This Article