ಧಾರವಾಡ: ‘ಅಂಗವಿಕಲರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರವು ಹಲವು ಯೋಜನೆ ಜಾರಿಗೊಳಿಸಿದೆ. ಉಚಿತವಾಗಿ ಸಾಧನ ಸಲಕರಣೆ ನೀಡುತ್ತಿದೆ. ಅವುಗಳ ಪ್ರಯೋಜನ ಪಡೆದು ಉತ್ತಮ ಬದುಕು ರೂಪಿಸಿಕೊಳ್ಳಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಕೇಂದ್ರ ಸರ್ಕಾರದ ರಾಷ್ಟ್ರೀಯ ವಯೋಶ್ರೀ ಹಾಗೂ ಅಡಿಪ್ ಯೋಜನೆಯಡಿಯಲ್ಲಿ ತಾಲ್ಲೂಕಿನ ಹೆಬ್ಬಳ್ಳಿಯ ಮೂಗಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಅಂಗವಿಕಲ ಮತ್ತು ಹಿರಿಯ ನಾಗರಿಕ ಫಲಾನುಭವಿಗಳಿಗೆ ಉಚಿತ ಸಹಾಯಕ ಸಾಧನ ಸಲಕರಣೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಗ್ರಾಮೀಣ ಭಾಗದ ಎಲ್ಲ ಅಂಗವಿಕಲರಿಗೂ ಅನುಕೂಲ ಕಲ್ಪಿಸಬೇಕು ಎಂಬುದು ಪ್ರಧಾನಿ ಮೋದಿಯವರ ಉದ್ದೇಶ. ಈ ಕಾರಣಕ್ಕಾಗಿ ಅರ್ಹ ಎಲ್ಲ ಫಲಾನುಭವಿಗಳಿಗೆ ಉಚಿತವಾಗಿ ಸಲಕರಣೆಗಳನ್ನು ವಿತರಿಸಿ ವಿಶ್ವಾಸ ತುಂಬುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ’ ಎಂದರು.
‘ಹಿರಿಯ ನಾಗರಿಕರು ಮತ್ತು ಅಂಗವಿಕಲರು ಗೌರವಯುತವಾಗಿ ಉತ್ತಮ ಬದುಕು ನಡೆಸಬೇಕು. ಈ ನಿಟ್ಟಿನಲ್ಲಿ ₹ 14.60 ಲಕ್ಷ ವೆಚ್ಚದಲ್ಲಿ 158 ಮಂದಿಗೆ 794 ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ’ ಎಂದು ಹೇಳಿದರು.
‘ಅಂಗವಿಲಕರಿಗೆ ಅನೇಕ ಸಂದರ್ಭಗಳಲ್ಲಿ ಸಹಾಯಕ ಸಲಕರಣೆ ಪ್ರಮಾಣಪತ್ರ ಹಾಗೂ ಇತರ ಸೌಲಭ್ಯಗಳು ತಕ್ಷಣಕ್ಕೆ ಸಿಗುವುದಿಲ್ಲ. ಈ ಸಮಸ್ಯೆ ನಿವಾರಣೆಗೆ ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ ಪ್ರಧಾನ ಮಂತ್ರಿ ದಿವ್ಯಾಶ ಕೇಂದ್ರ ಆರಂಭಿಸಲಾಗಿದೆ. ಜಿಲ್ಲೆಯ ಅಂಗವಿಲಕರು ಈ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಅಗತ್ಯ ಸಹಾಯಕ ಉಪಕರಣವನ್ನು ಗ್ರಾಮಪಂಚಾಯಿತಿ ಮಟ್ಟದಲ್ಲಿ ಎಲ್ಲ ಫಲಾನುಭವಿಗಳ ಮನೆ ಮನೆಗೆ ತೆರಳಿ ತಲುಪಿಸಲಾಗುವುದು’ ಎಂದರು.
ಮಾಜಿ ಶಾಸಕ ಅಮೃತ ದೇಸಾಯಿ, ಇಒ ಗಂಗಾಧರ ಕಂದಕೂರ ತಹಶೀಲ್ದಾರ್ ಡಾ.ದೊಡ್ಡಪ್ಪ ಹೂಗಾರ, ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಠ್ಠಲ ಭೋವಿ, ಉಪಾಧ್ಯಕ್ಷೆ ಸುಶಿಲಮ್ಮ, ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ನಿಂಗಪ್ಪ ಸುತ್ತಗಟ್ಟಿ, ಗುರುನಾಥ ಗೌಡರ, ಶಂಕರ ಮುಗದ, ಶಂಕರಕುಮಾರ ದೇಸಾಯಿ, ಸಹದೇವ ಹಾವೇರಿ ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.