ಪುಣೆ: ಪೋರ್ಷೆ ಕಾರು ಅಪಘಾತ ಪ್ರಕರಣಕ್ಕೆ ಅಪ್ರಾಪ್ತ ಬಾಲಕನ ತಂದೆ ಮತ್ತು ಅಜ್ಜನ ಬಂಧನದ ನಂತರ, ಇದೀಗ ಪುಣೆ ಪೊಲೀಸರು ಆತನ ತಾಯಿಯನ್ನೂ ಬಂಧಿಸಿದ್ದಾರೆ. ರಕ್ತದ ಮಾದರಿ ತಿರುಚಿದ ಪ್ರಕರಣದಲ್ಲಿ ಅರೆಸ್ಟ್ ಮಾಡಲಾಗಿದೆ ಎಂದು ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ತಿಳಿಸಿದ್ದಾರೆ.
”ಆರೋಪಿ ಬಾಲಕನ ತಾಯಿಯನ್ನು ಇಂದು (ಶನಿವಾರ) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ರಕ್ತದ ಮಾದರಿ ತಿರುಚಿದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದ್ದು, ಕ್ರೈಂ ಬ್ರಾಂಚ್‌ನಿಂದ ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಸಸೂನ್ ಆಸ್ಪತ್ರೆಯ ಇಬ್ಬರು ವೈದ್ಯರು ಮತ್ತು ವಾರ್ಡ್ ಬಾಯ್ನನ್ನು ಈಗಾಗಲೇ ಬಂಧಿಸಲಾಗಿದೆ. ರಕ್ತದ ಮಾದರಿಯನ್ನು ತಿರುಚಿದ ಆರೋಪದ ಮೇಲೆ ಬಾಲಕನ ತಂದೆಯ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಸಸೂನ್ ಆಸ್ಪತ್ರೆಯಲ್ಲಿ ಖಾಸಗಿ ವ್ಯಕ್ತಿಯಿಂದ ಅಪ್ರಾಪ್ತ ಬಾಲಕನ ರಕ್ತದ ಮಾದರಿಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ ಎಂಬುದು ಇತ್ತೀಚೆಗೆ ವರದಿಯಾಗಿದೆ. ರಕ್ತದ ಮಾದರಿಗಳು ಅಪ್ರಾಪ್ತ ಬಾಲಕನ ತಾಯಿಗೆ ಸೇರಿದ್ದವು. ಇದರಿಂದ ಪುಣೆ ಪೊಲೀಸರು ಅಪ್ರಾಪ್ತ ಬಾಲಕನ ತಾಯಿಯನ್ನು ಬಂಧಿಸಿ ತನಿಖೆ ನಡೆಸುವಂತೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಆದೇಶ ನೀಡಿದ್ದರು.