ನವದೆಹಲಿ, ಜುಲೈ 16: ಮುಂದಿನ ವಾರ ಮಂಡನೆಯಾಗಲಿರುವ ಕೇಂದ್ರ ಬಜೆಟ್ನಲ್ಲಿ ಇರುವ ನಿರೀಕ್ಷೆಗಳಲ್ಲಿ ಪಿಎಂ ಕಿಸಾನ್ ಯೋಜನೆ ಹಣ ಹೆಚ್ಚಳವೂ ಇದೆ. ವರದಿಗಳ ಪ್ರಕಾರ ಪಿಎಂ ಕಿಸಾನ್ ಯೋಜನೆಗೆ ಬಜೆಟ್ನಲ್ಲಿ ನೀಡಲಾಗುವ ಹಣದಲ್ಲಿ ಶೇ. 30ರಷ್ಟು ಹೆಚ್ಚಳ ಆಗಬಹುದು ಎನ್ನಲಾಗುತ್ತಿದೆ. ಮಧ್ಯಂತ ಬಜೆಟ್ನಲ್ಲಿ ಈ ಯೋಜನೆಗೆ ಒಂದು ವರ್ಷಕ್ಕೆ 60,000 ಕೋಟಿ ರೂ ಎತ್ತಿ ಇಡಲಾಗಿತ್ತು. ಜುಲೈ 17ರ ಬಜೆಟ್ನಲ್ಲಿ ಈ ಹಂಚಿಕೆಯನ್ನು 80,000 ಕೋಟಿ ರೂಗೆ ಹೆಚ್ಚಿಸಬಹುದು ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ ಈ ಬಾರಿಯ ಬಜೆಟ್ನಲ್ಲಿ ಯುವಜನರು, ಮಹಿಳೆಯರು, ರೈತರು ಮತ್ತು ಗ್ರಾಮೀಣಭಾಗ ಈ ನಾಲ್ಕು ಅಂಶಗಳಿಗೆ ಹೆಚ್ಚಿನ ಒತ್ತು ಕೊಡಬಹುದು. ಹೀಗಾಗಿ, ಪಿಎಂ ಕಿಸಾನ್ ಯೋಜನೆಗೆ ಹಣ ಹಂಚಿಕೆ ಹೆಚ್ಚಿಸುವ ಸಾಧ್ಯತೆ ಗಟ್ಟಿಯಾಗಿದೆ. ರೈತ ಸಂಘಟನೆಗಳ ಪ್ರತಿನಿಧಿಗಳು ಈಗಾಗಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಪಿಎಂ ಕಿಸಾನ್ ಯೋಜನೆ ಹಾಗು ಇತರ ಯೋಜನೆಗಳಿಗೆ ಹೆಚ್ಚಿನ ಹಣ ಹಂಚಿಕೆ ಮಾಡಿ ರೈತರಿಗೆ ನೆರವಾಗುವಂತೆ ಮನವಿ ಮಾಡಿದ್ದಾರೆ.
ಸದ್ಯ, ಪಿಎಂ ಕಿಸಾನ್ ಯೋಜನೆಯಲ್ಲಿ ಒಂದು ವರ್ಷದಲ್ಲಿ 6,000 ರೂ ಹಣವನ್ನು ರೈತರಿಗೆ ನೀಡಲಾಗುತ್ತಿದೆ. ಅಂದರೆ, ತಲಾ 2,000 ರೂಗಳಂತೆ ಮೂರು ಕಂತುಗಳಲ್ಲಿ ಈ ಹಣವನ್ನು ನೀಡಲಾಗುತ್ತಿದೆ. ಈಗ ಒಂದು ಕಂತು ಹೆಚ್ಚು ಮಾಡಬಹುದು. 2,000 ರೂಗಳ ನಾಲ್ಕು ಕಂತುಗಳನ್ನು ರೈತರ ಖಾತೆಗಳಿಗೆ ಹಾಕಬಹುದು. ಒಟ್ಟು ಒಂದು ವರ್ಷದಲ್ಲಿ 8,000 ರೂ ಹಣವು ರೈತರಿಗೆ ಸಿಗಲಿದೆ.