ಬಹುತ್ವ ಸಂಸ್ಕೃತಿ ಭಾರತದ ಬೆನ್ನೆಲುಬು-ಡಾ ಸೋಮಶೇಖರ್

Ravi Talawar
ಬಹುತ್ವ ಸಂಸ್ಕೃತಿ ಭಾರತದ ಬೆನ್ನೆಲುಬು-ಡಾ ಸೋಮಶೇಖರ್
WhatsApp Group Join Now
Telegram Group Join Now

ಬಳ್ಳಾರಿ ಮೇ ೧೪. ಜಾತ್ಯಾತೀತ ಹಾಗೂ ಬಹುತ್ವ ಸಂಸ್ಕೃತಿಯ ಭಾರತದ ಬೆನ್ನೆಲುಬಾಗಿದೆ ಆದರೆ ಅದನ್ನೀಗ ಏಕರೂಪದ ಭಾರತವನ್ನಾಗಿ ಪರಿವರ್ತಿಸುವ ಹುನ್ನಾರ ದೇಶದಲ್ಲಿ ನಡೆಯುತ್ತಿದೆ. ನಾವು ಬುದ್ಧ, ಬಸವ ಹಾಗೂ ಅಂಬೇಡ್ಕರ್‌ರವರ ನೀಡಿರುವ ಸಂವಿಧಾನದ ಋಣದ ಮಕ್ಕಳಾಗಿದ್ದೇವೆ ಎಂದು ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ ಅಪ್ಪಗೆರೆ ಸೋಮಶೇಖರ್ ಹೇಳಿದರು.
ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಬುದ್ಧ, ಬಸವ, ಅಂಬೇಡ್ಕರ್ ವಿಚಾರೋತ್ಸವ ಕಾರ್ಯಕ್ರಮವನ್ನು ಅವರುಗಳ ಭಾವಚಿತ್ರಕ್ಕೆ ಗಣ್ಯರೊಂದಿಗೆ ಪುಪ್ಪಾರ್ಚನೆ ನೆರವೇರಿಸಿ ಮಾತನಾಡಿದರು.

ಬುದ್ಧ, ಬಸವ, ಅಂಬೇಡ್ಕರ್‌ರವರ ತತ್ವಗಳಿಂದ ಭಾರತದ ಸಂವಿಧಾನ ರಚಿತವಾಗಿದೆ. ಸಂವಿಧಾನವು ದೇಶದಲ್ಲಿರುವ ಎಲ್ಲ ವರ್ಗದವರಿಗೆ ಅನ್ವಯಿಸುತ್ತದೆ ಆದರೆ ಸಂವಿಧಾನಕ್ಕೆ ಅಪಚಾರ ನಡೆದಾಗ ಅದನ್ನು ಖಂಡಿಸುವುದು ದಲಿತರು ಮಾತ್ರ. ವ್ಯಕ್ತಿ ಮತ್ತು ಸಮುದಾಯ ಪ್ರಗತಿ ಹೊಂದಲು ನಮ್ಮಲ್ಲಿರುವ ಕೀಳರಿಮೆ ಮನಸ್ಥಿತಿಯಿಂದ ಹೊರಬರಬೇಕು. ಈ ಮೂರು ಮಹಾನ್ ವ್ಯಕ್ತಿಗಳ ಆಶಯಗಳು ಭಾರತದ ಸಂವಿಧಾನದ ರೂಪದಲ್ಲಿ ಮೂಡಿ ಬಂದಿವೆ ಎಂದು ಹೇಳಿದರು.

ಬೌದ್ಧ ಸಾಹಿತಿಗಳಾದ ಆಯುಷ್ಮಾನ್ ಬುದ್ಧಘೋಷ್ ದೇವೇಂದ್ರ ಹೆಗ್ಗಡೆ ಮಾತನಾಡಿ, ಬುದ್ಧ ಕಾಲಾತೀತ ಪುರುಷ. ಎಲ್ಲ ಕಾಲಕ್ಕೂ ಸಾಗುವ ಬುದ್ಧನ ವಿಚಾರಗಳು ಅಂದಿನಿಂದ ಇಲ್ಲಿಯವರಗೆಗೂ ಪ್ರಸ್ತುತವಾಗಿದೆ. ಬುದ್ಧನ ಪಂಚಶೀಲವು ಎಲ್ಲ ಜಾತಿ, ಧರ್ಮ, ಜನಾಂಗಕ್ಕೆ ಬೆಳಕನ್ನು ನೀಡುವುದಾಗಿದೆ. ಪ್ರತಿಯೊಂದು ಸಮಸ್ಯೆಗೂ ಬುದ್ಧನಲ್ಲಿ ಪರಿಹಾರವಿದೆ. ಇಂದಿನ ಯುವ ಪೀಳಿಗೆಗೆ ಬುದ್ಧನ ಪರಿಚಯ ಇಲ್ಲದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಾಹಿತಿಗಳು ಹಾಗೂ ವಿವಿಯ ಸಿಂಡಿಕೇಟ್ ಸದಸ್ಯರಾದ ಪ್ರೊ. ಅಮರೇಶ್ ನುಗಡೋಣಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಗಳು ಮನುಷ್ಯ ಜೀವನಕ್ಕೆ ಅವಶ್ಯವಾದ ವಿಚಾರಗಳಾಗಿವೆ. ಬಸವಣ್ಣನ ಚಿಂತನೆಗಳನ್ನು ಸ್ವೀಕರಿಸಿದವರು ಕೆಳವರ್ಗದ ಜನಾಂಗದರು. ಕತ್ತಲೆಯಿಂದ ಬೆಳಕಿನಡೆಗೆ ಸಾಗಲು ಇವರ ವಿಚಾರಗಳು ಪ್ರೇರಣೆಯಾಗಿವೆ. ಬಸವಣ್ಣನವರ ವಚನಗಳು ಮತ್ತು ಅವರಲ್ಲಿದ್ದ ಜ್ಞಾನದ ಅರಿವು ಹೊಸತನದೆಡೆಗೆ ಸಾಗುವುದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿಗಳಾದ ಪ್ರೊ ಎಂ ಮುನಿರಾಜು ಮಾತನಾಡಿ, ಅನ್ಯಾಯಕ್ಕೆ ಒಳಗಾದ ಪ್ರತಿಯೊಂದು ಜಾತಿಗೆ ನ್ಯಾಯ ದೊರಕಿಸಿದವರು ಅಂಬೇಡ್ಕರ್‌ರವರು. ಬುದ್ಧ, ಬಸವ ಅಂಬೇಡ್ಕರ್‌ರವರ ವೈಚಾರಿಕತೆಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಅವರ ಚಿಂತನೆಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಕುಟುಂಬ, ಸಮಾಜ, ದೇಶಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕೆಂದು ಅಭಿಪ್ರಾಯಪಟ್ಟರು.

ಕಳೆದ ವಾರ ಜರುಗಿದ್ದ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಆಯುಷ್ಮಾನ್ ಎನ್.ಡಿ. ವೆಂಕಮ್ಮ ಬುದ್ಧ ವಂದನೆ ಸಲ್ಲಿಸಿದರು. ವಿವಿಯ ಕುಲಸಚಿವರಾದ ಎಸ್ ಎನ್ ರುದ್ರೇಶ್, ಮೌಲ್ಯಮಾಪನ ಕುಲಸಚಿವರಾದ ಪ್ರೊ ಎನ್ ಎಂ ಸಾಲಿ, ಕಾರ್ಯಕ್ರಮದ ಸಂಚಾಲಕರಾದ ಪ್ರೊ ಎನ್ ಶಾಂತನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಪ್ರಾರಂಭಕ್ಕೂ ಮೊದಲು ವಿವಿಯ ಕುಲಸಚಿವರಾದ ಎಸ್ ಎನ್ ರುದ್ರೇಶ್ ಇವರ ನೇತೃತ್ವದಲ್ಲಿ ಬುದ್ಧ, ಬಸವ, ಅಂಬೇಡ್ಕರ್‌ರವರ ಭಾವಚಿತ್ರವನ್ನೊಳಗೊಂಡ ತೆರೆದ ವಾಹನ ಹಾಗೂ ಅವರುಗಳ ವೇಷಭೂಷಣ ಧರಿಸಿದ್ದ ವಿದ್ಯಾರ್ಥಿಗಳನ್ನು ಒಳಗೊಂಡ ಮೆರವಣಿಗೆಯು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಡಾ ಸುಷ್ಮಾ ಜೋಗನ್ ಹಾಗೂ ಡಾ ಶ್ರೀದೇವಿ ಆಲೂರು ನಿರೂಪಿಸಿದರು. ಪ್ರದರ್ಶನ ಕಲೆ ಹಾಗೂ ನಾಟಕ ವಿಭಾಗದ ವತಿಯಿಂದ ಕ್ರಾಂತಿ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು.
ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಫೋಟೊ೧೪ಬಿಎಲ್‌ಆರ್೦೩—ಬುದ್ಧ, ಬಸವ, ಅಂಬೇಡ್ಕರ್ ವಿಚಾರೋತ್ಸವ ಕಾರ್ಯಕ್ರಮವನ್ನು ಗಣ್ಯರು ಪುಪ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿದರು.

WhatsApp Group Join Now
Telegram Group Join Now
Share This Article