ವಾಷಿಂಗ್ಟನ್: ಇಸ್ರೇಲ್- ಹಮಾಸ್ ನಡುವಿನ ಕದನ ವಿರಾಮದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಇಸ್ರೇಲ್ನ ಗಾಜಾ ಪಟ್ಟಿಯನ್ನು ಸ್ವಾಧೀನಕ್ಕೆ ಪಡೆಯಲು ಪ್ಲಾನ್ ಮಾಡಿದ್ದಾರೆ. ಅಮೆರಿಕಕ್ಕೆ ಭೇಟಿ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆಗಿನ ಮಾತುಕತೆಯ ನಂತರ ಟ್ರಂಪ್ ಈ ಬಗ್ಗೆ ಘೋಷಣೆ ಮಾಡಿರುವುದು ಭಾರೀ ಕುತೂಹಲ ಮೂಡಿಸಿದೆ. ಅಲ್ಲದೆ, ಈ ಪ್ರಸ್ತಾಪದ ಬಗ್ಗೆ ಜಗತ್ತಿನಾದ್ಯಂತ ಚರ್ಚೆಗಳು ಶುರುವಾಗಿವೆ. ಪುನರಾಭಿವೃದ್ಧಿ ಯೋಜನೆಯಡಿ ಅಮೆರಿಕ ಗಾಜಾ ಪಟ್ಟಿಯನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇಸ್ರೇಲ್-ಪ್ಯಾಲೆಸ್ತೀನಿಯನ್ ಸಂಘರ್ಷದ ಬಗ್ಗೆ ದಶಕಗಳ ಕಾಲದ ಯುಎಸ್ ನೀತಿಯನ್ನು ರದ್ದುಗೊಳಿಸಿದ ಆಘಾತಕಾರಿ ಘೋಷಣೆಯ ಬೆನ್ನಲ್ಲೇ ಟ್ರಂಪ್ ಯುನೈಟೆಡ್ ಸ್ಟೇಟ್ಸ್ ಗಾಜಾ ಪಟ್ಟಿಯನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಮತ್ತು ನಾವು ಗಾಜಾದೊಂದಿಗೆ ಕೆಲಸ ಮಾಡುತ್ತೇವೆ ಎಂದಿದ್ದಾರೆ.