ಬೆಂಗಳೂರು,ಅಕ್ಟೋಬರ್ 21: ಬೆಂಗಳೂರಿನ ಯಾವುದೇ ದಿಕ್ಕಿಗೆ ಹೋದರೂ ಟ್ರಾಫಿಕ್ ಕಿರಿಕಿರಿ ಸರ್ವೆಸಾಮಾನ್ಯವಾಗಿದೆ.ಇದಕ್ಕೆ ಹಲವು ಕಾರಣಗಳಿದ್ದು, ಟ್ರಾಫಿಕ್ ಸಿಗ್ನಲ್ಗಳ ಬಳಿ ಬಸ್ ನಿಲ್ದಾಣಗಳಿರುವುದೂ ಪ್ರಮುಖ ಕಾರಣವಾಗಿದೆ. ಹೀಗಾಗಿ ನಗರದ ಎಲ್ಲೆಲ್ಲಿ ಅವೈಜ್ಞಾನಿಕವಾಗಿ, ಅಸಮರ್ಪಕ ಬಸ್ ನಿಲ್ದಾಣಗಳಿವೆಯೋ ಅವುಗಳನ್ನು ಸ್ಥಳಾಂತರ ಮಾಡಲು ಟ್ರಾಫಿಕ್ ಪೊಲೀಸರು ಹಾಗೂ ಬಿಎಂಟಿಸಿ ಜಂಟಿ ಸಮೀಕ್ಷೆ ನಡೆಸಿ ಪಟ್ಟಿ ಸಿದ್ಧ ಮಾಡಿದೆ.
ಬೆಂಗಳೂರಿನಲ್ಲಿ ಓಡಾಟ ಮಾಡುವ ವಾಹನಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಟ್ರಾಫಿಕ್ ದಟ್ಟಣೆ ಕೂಡ ಗಮನಾರ್ಹವಾಗಿ ಹೆಚ್ಚಾಗಿದೆ. ಹದಗೆಟ್ಟಿರುವ ರಸ್ತೆಗಳು, ರಸ್ತೆ ಗುಂಡಿಗಳು, ಅಡ್ಡಾದಿಡ್ಡಿ ಪಾರ್ಕಿಂಗ್ ಜೊತೆಗೆ ಟ್ರಾಫಿಕ್ ಸಿಗ್ನಲ್ಗಳ ಬಳಿಯೇ ಬಸ್ ನಿಲ್ದಾಣಗಳಿರುವುದೂ ಕೂಡ ಟ್ರಾಫಿಕ್ ಜಾಮ್ ಹೆಚ್ಚಾಗಲು ಕಾರಣವಾಗಿದೆ. ಹೀಗಾಗಿಯೇ ಈ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿರುವ ಬೆಂಗಳೂರು ಸಂಚಾರ ಪೊಲೀಸರು, ಬಿಎಂಟಿಸಿ ಅಧಿಕಾರಿಗಳ ಜೊತೆ ಜಂಟಿ ಸಮೀಕ್ಷೆ ನಡೆಸಿ ಸ್ಥಳಾಂತರ ಮಾಡಬೇಕಾದ 103 ಬಸ್ ನಿಲ್ದಾಣಗಳ ಪಟ್ಟಿ ಮಾಡಿದ್ದಾರೆ.
ಸಾಮಾನ್ಯವಾಗಿ ಹೆಚ್ಚಿನ ದಟ್ಟಣೆಯ ಸಾಕ್ಷಿಯಾಗುವ ಸಿಗ್ನಲ್ಗಳಿಗೆ ಸಮೀಪವಿರುವ 103 ಬಸ್ ನಿಲ್ದಾಣಗಳನ್ನ ಕನಿಷ್ಠ 50 ಮೀಟರ್ಗಳಿಂದ 300 ಮೀಟರ್ಗಳವರೆಗೂ ಸ್ಥಳಾಂತರ ಮಾಡುವ ಅನಿವಾರ್ಯತೆ ಇದೆ ಎಂದು ಬೆಂಗಳೂರು ಸಂಚಾರ ಪೊಲೀಸರು, ಬಿಎಂಟಿಸಿ ಸಮೀಕ್ಷೆಯಲ್ಲಿ ಮನಗಂಡಿದ್ದಾರೆ. ಹೀಗಾಗಿ ಸ್ಥಳಾಂತರ ಮಾಡಿ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂ, ಎಂ.ಜಿ ರಸ್ತೆ, ಯಲಹಂಕ ಆರ್ಎಂಜೆಡ್, ಈಸ್ಟ್ ಎಂಡ್ ಜಂಕ್ಷನ್, ಐಟಿಪಿಎಲ್ ಆರ್ಎಕ್ಸ್ಡಿಕ್ಸ್ ಆಸ್ಪತ್ರೆ, ಹೋಫ್ಫಾರ್ಮ್ ಜಂಕ್ಷನ್ ಸೇರಿ 103 ಸ್ಥಳಗಳಲ್ಲಿ ಟ್ರಾಫಿಕ್ ದಟ್ಟಣೆ ಇಳಿಸುವ ಉದ್ದೇಶವಿದೆ.