ಜಮಖಂಡಿ;ಛಾಯಾಚಿತ್ರ ತೆಗೆಯುವದು ವಿಶಿಷ್ಟವಾದ ಕಲೆಯಾಗಿದೆ. ಛಾಯಾ ಚಿತ್ರಗಳು ಇತಿಹಾಸದ ಸಾಕ್ಷಿಗಳಾಗಿವೆ, ಎಲ್ಲ ಸಂದರ್ಭದಲ್ಲೂ ಛಾಯಾ ಚಿತ್ರಗಳಿಗೆ ವಿಶೇಷವಾದ ಮಹತ್ವ ಇದೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು. ಭಾನುವಾರ ನಗರದ ಬಸವ ಭವನದಲ್ಲಿ ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ನೂತನ ಕಚೇರಿ ಉದ್ಘಾಟನೆ ಹಾಗೂ 14 ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ನೈಸರ್ಗಿಕ ವಿಕೋಪಗಳು, ಯುದ್ಧ, ದಂಗೆಗಳ ಸಂದರ್ಭದಲ್ಲಿ ಜೀವವನ್ನು ಲೆಕ್ಕಿಸದೇ ಛಾಯಾಗ್ರಾಹಕರು ಸಲ್ಲಿಸುವ ಸೇವೆ ಹೆಮ್ಮೆ ಪಡುವಂತಹದ್ದಾಗಿದೆ ಎಂದು ಹೇಳಿದರು. ಸರ್ಕಾರ ಛಾಯಾಗ್ರಾಹಕರ ಸಮಸ್ಯೆಗಳ ಕುರಿತು ಗಮನ ಹರಿಸಬೇಕು, ಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡಬೇಕಾಗಿದೆ. ಸಂಘಕ್ಕೆ ವಯಕ್ತಿಕವಾಗಿ 1 ಲಕ್ಷರೂಗಳ ಧನ ಸಹಾಯ ಮಾಡಿದ ಅವರು ಸಂಘ ಹೆಮ್ಮರವಾಗಿ ಬೆಳೆಯಲು ಎಲ್ಲರೀತಿಯ ಸಹಾಯ ಸಹಕಾರ ನೀಡುವದಾಗಿ ಭರವಸೆ ನೀಡಿದರು.ಮಾಜಿ ಶಾಸಕ ಆನಂದ ನ್ಯಾಮಗೌಡ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದರು. ಛಾಯಾಚಿತ್ರಗಳು ಹಲವುಬಾರಿ ಸಾಕ್ಷಿಗಳಾಗುತ್ತವೆ. ಹತ್ತು ಹಲವು ಮಾತುಗಳಿಗಿಂತ ಒಂದು ಚಿತ್ರ ಎಲ್ಲವನ್ನು ಹೇಳಿಬಿಡುತ್ತದೆ. ಮನಸ್ಸಿನ ಭಾವನೆಗಳನ್ನು ವ್ಯಕ್ತ ಪಡಿಸುತ್ತವೆ. ಮಧುರ ಕ್ಷಣಗಳು, ದುಖದ ಸನ್ನಿವೇಶಗಳು, ಕೋಪ, ವಿನಂಮ್ರತೆ ಹೀಗೆ ಎಲ್ಲ ಜೀವನದ ಮಜಲುಗಳಿಗೆ ಛಾಯಾಚಿತ್ರಗ ಳು ಸಾಕ್ಷಿಯಾಗಿವೆ ಎಂದು ಹೇಳಿದರು. ಸಂಘದ ಅಭಿವೃದ್ಧಿಗೆ ಸಹಕರಿಸುವದಾಗಿ ತಿಳಿಸಿದರು.
ರಾಜ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಭಟ್ ಮಾತನಾಡಿ ಎಲ್ಲ ಕೆಲಸಗಳು ಮಹತ್ವದ್ದಾಗಿವೆ. ಪ್ರಾಮಾಣಿಕತೆಯಿಂದ ಮಾಡುವ ಕೆಲಸಕ್ಕೆ ಶ್ರೇಯಸ್ಸು ಸಿಕ್ಕೇ ಸಿಕ್ಕುತ್ತದೆ. ಛಾಯಾಗ್ರಾಹಕರು ದುಶ್ಚಟಗಳಿಂದ ದೂರವಿರಬೇಕು, ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಹೆಚ್ಚಿನ ಆದಾಯ ಪಡೆದುಕೊಳ್ಳಬಹುದು ಎಂದು ಹೇಳಿದರು. ವೃತ್ತಿಯಲ್ಲಿ ಆಸಕ್ತಿ ಹಾಗೂ ಪ್ರೀತಿಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಓಲೆ ಮಠದ ಆನಂದ ದೇವರು ಮಾತನಾಡಿ ಜೀವನದ ಪ್ರತಿ ಹಂತದಲ್ಲೂ ಛಾಯಾಚಿತ್ರಗಳು ಅವಶ್ಯವಾಗಿವೆ. ಎಲ್ಲ ಕಾರ್ಯಕ್ರಮದ ಯಶಸ್ಸಿಗೆ ಚಿತ್ರಗಳು ಅವಶ್ಯಕವಾಗಿದೆ ಎಂದು ಹೇಳಿದರು. ಪೊಟೋ ತೆಗೆದು ಕೊಳ್ಳಲು ಬರುವ ಪ್ರತಿ ಗಿರಾಕಿಗೆ ಸ್ಮಲ್ ಪ್ಲೀಸ್ ಎಂದು ಹೇಳುವ ತಮ್ಮ ವೃತ್ತಿ ಹೆಮ್ಮೆಪಡುವಂಥಹದು, ಎಲ್ಲರನ್ನು ನಗುನಗುತ್ತ ಬದುಕಲು ಪ್ರೇರೆಪಿಸುವದು ಒಂದು ಸಮಾಜ ಸೇವೆ ಇದ್ದಂತೆ ಜೀವನದಲ್ಲಿ ಎಲ್ಲರೂ ನಗುತ್ತಿರಲಿ ಎಂಬ ಭಾವ ಅದರಲ್ಲಿ ಅಡಕವಾಗಿದೆ ಎಂದು ಆಶೀರ್ವಚನ ನೀಡಿದರು. ತಾಲೂಕ ಛಾಯಾಚಿತ್ರ ಗ್ರಾಹಕರ ಸಂಘದ ಈರನಗೌಡ ಪಾಟೀಲ್, ಮುಜಾಯಿದ್ ದಿಲಾವರ, ರಮೇಶ್ ಹಲವಾಯಿ, ಆನಂದ ಪುಕಾಳೆ, ಹಾಶೀಮ್ ಜಮಖಂಡಿ, ಅಶೋಕ ಜೋಶಿ. ಶ್ರೀ ಶೈಲ್ ಮಾಳಿ ಸಂಜು ಕಬ್ಬೂರಿ,ರವೀಂದ್ರ ಕೋಳಿ, ಸುಭಾಷ ಕಾಸಿದ,ಶೇಖರ ಹರಕಂಗಿ,ರವೀಂದ್ರ ಜಂಬಗಿ, ಉಮರ್ ಮುಲ್ಲಾ, ಅನ್ನಪ್ಪಾ ಮೋಹಿತೆ, ಬಡಕಲ್ಲ ನದಾಪ, ಸಿದ್ದು ಗಡದಿ,ಪ್ರಹ್ಲಾದ ಲೋಗಾವಿ ರಾಜು ಆಜೂರ, ಜಗದೀಶ ತೆಗ್ಗಿನ ಮಠ, ಉಪಸ್ಥಿತರಿದ್ದರು. ಅಶೋಕ ಜೋಷಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರದೀಪ ಹಂಚಿನಾಳ ಕಾರ್ಯಕ್ರಮ ನಿರೂಪಿಸಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ರವೀಂದ್ರ ಕೋಳಿ ವಂದಿಸಿದರು.