ಬೆಳಗಾವಿ: ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಕಬ್ಬು, ಹಾಲು ಬೆಲೆ, ಸಾಲಮನ್ನಾ, ಕೃಷಿ ಭೂಮಿ ವಿವಾದ ಮತ್ತು ನೀರಾವರಿ ಯೋಜನೆಗಳು ಸೇರಿದಂತೆ 23 ಪ್ರಮುಖ ಮತ್ತು ಜ್ವಲಂತ ಸಮಸ್ಯೆಗಳನ್ನು ಸರ್ಕಾರ ತ್ವರಿತವಾಗಿ ಬಗೆಹರಿಸಬೇಕೆಂದು ಸಂಘವು ಒತ್ತಾಯಿಸಿದೆ.
ಕಬ್ಬು ಮತ್ತು ಹೈನುಗಾರಿಕೆ ಕುರಿತ ಬೇಡಿಕೆಗಳು:
ಕಬ್ಬು ಬೆಳೆಗಾರರ ಪರವಾಗಿ ಸಂಘವು ಪ್ರಮುಖವಾಗಿ ಪ್ರತಿ ಟನ್ ಕಬ್ಬಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ₹1000 ಸೇರಿಸಿ ಕನಿಷ್ಠ ₹2000 ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿದೆ. ಅಲ್ಲದೆ, ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲಿ ಡಿಜಿಟಲ್ ತೂಕ ಯಂತ್ರಗಳನ್ನು ಸ್ಥಾಪಿಸಿ, ತೂಕದ ರಶೀದಿಯನ್ನು ತಕ್ಷಣ ನೀಡಬೇಕು, ಮೋಸವನ್ನು ತಡೆಯಲು ರಿಕವರಿ ನಿರ್ಧಾರವನ್ನು ಸರ್ಕಾರವೇ ಮಾಡಬೇಕು. ಹೈನುಗಾರಿಕೆ ರೈತರ ಆರ್ಥಿಕ ಮೂಲವಾಗಿರುವುದರಿಂದ, ಪ್ರತಿ ಲೀಟರ್ ಹಾಲಿಗೆ ಕನಿಷ್ಠ ₹100 ನಿಗದಿ ಮಾಡಬೇಕು ಎಂದು ಒತ್ತಾಯಿಸಲಾಗಿದೆ.ಕಬ್ಬು, ಹಾಲು, ಸಾಲಮನ್ನಾ ಮತ್ತು ನೀರಾವರಿ ಯೋಜನೆಗಳ ಕುರಿತು ರೈತರ ಜ್ವಲಂತ ಸಮಸ್ಯೆಗಳ ತ್ವರಿತ ಇತ್ಯರ್ಥಕ್ಕೆ ಕ್ರಮ ತೆಗೆದುಕೊಳ್ಳಲು ಅಗ್ರಹಿಸಿದೆ.
ಆರ್ಥಿಕ ಭದ್ರತೆ ಮತ್ತು ಮೂಲಸೌಕರ್ಯ:
ರೈತರು ಅನುಭವಿಸಿದ ಬರಗಾಲ ಮತ್ತು ಪ್ರವಾಹದಿಂದಾದ ಬೆಳೆ ಹಾನಿಯನ್ನು ಗಂಭೀರವಾಗಿ ಪರಿಗಣಿಸಿ, ಅವರ ಸಂಪೂರ್ಣ ಸಾಲಮನ್ನಾ ಮಾಡಬೇಕು ಮತ್ತು ಸಾಲ ವಸೂಲಾತಿಯನ್ನು ತಕ್ಷಣವೇ ನಿಲ್ಲಿಸಬೇಕು. ಮೆಕ್ಕೆಜೋಳ ಮತ್ತು ಹೆಸರು ಕಾಳು ಖರೀದಿ ಕೇಂದ್ರಗಳನ್ನು ತಕ್ಷಣವೇ ಪ್ರಾರಂಭಿಸಿ, ಪ್ರತಿ ರೈತರಿಗೆ ಕನಿಷ್ಠ 100 ಕ್ವಿಂಟಲ್‌ವರೆಗೆ ಅವಕಾಶ ನೀಡಬೇಕು. ರೈತರ ಉತ್ಪನ್ನಗಳನ್ನು ಸುಲಭವಾಗಿ ಸಾಗಿಸಲು ಹಳ್ಳಿ ರಸ್ತೆಗಳನ್ನು ಡಾಂಬರೀಕರಣ ಮಾಡಲು ಮತ್ತು ಹೊಲದ ರಸ್ತೆಗಳಿಗೆ ಬಜೆಟ್‌ನಲ್ಲಿ ₹50,000 ಕೋಟಿ ಮೀಸಲಿಡುವಂತೆ ಮನವಿ ಮಾಡಿದೆ.
ತುಂಗಭದ್ರಾ ಮತ್ತು ಆಲಮಟ್ಟಿ ಜಲಾಶಯಗಳನ್ನು ಮೇಲ್ದರ್ಜೆಗೇರಿಸುವಿಕೆ, ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಎಲ್ಲಾ ನೀರಾವರಿ ಯೋಜನೆಗಳನ್ನು ಪುನಃ ಚಾಲನೆಗೊಳಿಸುವುದು, ಮತ್ತು ಕೆರೆಗಳ ಹೂಳೆತ್ತುವ ಕಾರ್ಯಗಳಿಗೆ ಒತ್ತು ನೀಡಬೇಕು. ಭೂ ಸುಧಾರಣಾ ಕಾಯ್ದೆಗಳಾದ 79 A ಮತ್ತು 79 B ಯನ್ನು ಹಿಂಪಡೆಯಬೇಕು. ರಾತ್ರಿ ವೇಳೆಯಲ್ಲಿ ಹೊಲಕ್ಕೆ ನೀರು ಹಾಯಿಸುವಾಗ ಆಗುವ ಸಮಸ್ಯೆಗಳ ಕುರಿತು ರೈತರ ಗೋಳು ಅಳಿಸಿ ಹಗಲಿ ಹೊತ್ತು ಹೆಚ್ಚು ವಿದ್ಯುತ್ ಒದಗಿಸುವ ಕುರಿತು ರಾಜ್ಯದ ಎಲ್ಲ ಭಾಗಗಳ ರೈತ ಮುಖಂಡರು ವೇದಿಕೆಯ ಮೇಲೆ ಮಾತನಾಡಿದರು.
ಸಂಘದ ರಾಜ್ಯಾಧ್ಯಕ್ಷರಾದ ಚುನ್ನಪ್ಪ ಪೂಜೇರಿ, ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಸೇರಿದಂತೆ ಅನೇಕ ಪದಾಧಿಕಾರಿಗಳು ಮನವಿಗೆ ಸಹಿ ಹಾಕಿದ್ದಾರೆ. ಈ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸದಿದ್ದರೆ, ಉಗ್ರ ಹೋರಾಟವನ್ನು ಎದುರಿಸಬೇಕಾದೀತು ಎಂದು ರೈತ ಸಂಘವು ಎಚ್ಚರಿಕೆ ನೀಡಿದೆ.
ಪ್ರತಿಭಟನಾ ನಿರತ ಸ್ಥಳಕ್ಕೆ ಸಕ್ಕರೆ ಸಚಿವ ಶಿವಾನಂದ ಪಾಟೀಲ ಆಗಮಿಸಿ ಕರ್ನಾಟಕ ರಾಜ್ಯ ರೈತ ಸಂಘದ ಮನವಿ ಸ್ವೀಕರಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ಪರಿಹಾರಿಸಲಾಗುವದೆಂದರು.


