ಧಾರವಾಡ: ಪಿತ್ರಾರ್ಜಿತವಾಗಿ ಉಳುಮೆ ಮಾಡುತ್ತ ಬಂದಿರುವ ರೈತರ ಜಮೀನುಗಳು ಇದೀಗ ವಕ್ಫ ಆಸ್ತಿಗೆ ಒಳಪಡುತ್ತಿವೆ. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಅನೇಕ ರೈತರ ಜಮೀನುಗಳು ವಕ್ಫ ಆಸ್ತಿಗೆ ಒಳಪಟ್ಟಿರುವುದಾಗಿ ಪಹಣಿ ಪತ್ರಿಕೆಯಲ್ಲಿ ನಮೂದಾಗಿದ್ದು, ಇದರ ತಿದ್ದುಪಡಿಗಾಗಿ ರೈತರು ಪರದಾಡುತ್ತಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.
ಹೀಗೆ ತಮ್ಮ ಜಮೀನನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿರುವ ಈ ರೈತರೆಲ್ಲ ಉಪ್ಪಿನ ಬೆಟಗೇರಿ ಗ್ರಾಮದವರು. 3 ಎಕರೆ, 5 ಎಕರೆ ಹಾಗೂ 20 ಎಕರೆ ಹೊಲಗಳ ಪಹಣಿ ಪತ್ರಿಕೆಯಲ್ಲಿ 2021, 2022 ಹಾಗೂ 2023 ರಲ್ಲಿ ರೈತರ ಜಮೀನುಗಳು ವಕ್ಫ ಆಸ್ತಿಗೆ ಒಳಪಟ್ಟಿವೆ ಎಂದು ನಮೂದಾಗಿದೆ. ಇದೇ ಪಹಣಿ ಪತ್ರಿಕೆಯನ್ನು 2018, 2019ರಲ್ಲಿ ತೆಗೆದು ನೋಡಿದಾಗ ಅದರಲ್ಲಿ ವಕ್ಫ ಆಸ್ತಿ ಎಂದು ನಮೂದಾಗಿಲ್ಲ. 2021, 2022ರಲ್ಲಿ ಈ ರೀತಿ ಪಹಣಿ ಪತ್ರಿಕೆಯ ಋಣಗಳು ಕಾಲಂನಲ್ಲಿ ವಕ್ಫ ಆಸ್ತಿಗೆ ಜಮೀನು ಒಳಪಟ್ಟಿದೆ ಎಂದು ನಮೂದಾಗಿದೆ.
ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಜವಳಗಿ, ಮಸೂತಿ ಹಾಗೂ ಹುಟಗಿ ಎಂಬ ಕುಟುಂಬಕ್ಕೆ ಸೇರಿದ ಜಮೀನುಗಳು ಪಿತ್ರಾರ್ಜಿತವಾಗಿದ್ದು, ಅವುಗಳನ್ನು ಈ ರೈತರು ಯಾರಿಂದಲೂ ದಾನವಾಗಿ ಪಡೆದಿಲ್ಲ ಆದರೂ ಇವರ ಜಮೀನಿನ ಪಹಣಿ ಪತ್ರಿಕೆಯಲ್ಲಿ ವಕ್ಫ ಆಸ್ತಿಗೆ ಈ ಜಮೀನು ಒಳಪಟ್ಟಿದೆ ಎಂದು ನಮೂದಾಗಿದ್ದು, ಅದನ್ನು ತೆಗೆದು ಹಾಕಲು ರೈತರು ವಕ್ಫ ಕಚೇರಿ, ತಹಶೀಲ್ದಾರ ಕಚೇರಿಗೆ ಅಲೆದಾಡಿದರೂ ಅಧಿಕಾರಿಗಳು ಮಾತ್ರ ಕ್ಯಾರೆ ಎಂದಿಲ್ಲ.
ಮರಬಸಪ್ಪ ಮಸೂತಿ ಅವರಿಗೆ ಸೇರಿದ 3 ಎಕರೆ 13 ಗುಂಟೆ, ಮಲ್ಲಿಕಾರ್ಜುನ ಹುಟಗಿ ಅವರಿಗೆ ಸೇರಿದ 5 ಎಕರೆ 37 ಗುಂಟೆ ಹಾಗೂ ಜವಳಗಿ ಅವರ ಕುಟುಂಬಕ್ಕೆ ಸೇರಿದ ಒಟ್ಟು 20 ಎಕರೆ ಜಮೀನಿಗೆ ವಕ್ಫ ಆಸ್ತಿಗೆ ಜಮೀನು ಒಳಪಟ್ಟಿದೆ ಎಂದು ನಮೂದಾಗಿದೆ. ಪಿತ್ರಾರ್ಜಿತವಾಗಿ ಸಾಗುವಳಿ ಮಾಡುತ್ತ ಬಂದಿರುವ ಆಸ್ತಿ ಇದ್ದಕ್ಕಿದ್ದಂತೆ ವಕ್ಫ ಆಸ್ತಿಗೆ ಒಳಪಟ್ಟಿದೆ ಎಂದು ನಮೂದಾಗಿರುವುದರಿಂದ ರೈತರಿಗೆ ಬರಸಿಡಿಲು ಬಡಿದಂತಾಗಿದ್ದು, ರೈತರು ತಮ್ಮ ಜಮೀನು ಉಳಿಸಿಕೊಳ್ಳಲು ಈಗ ಹೋರಾಟ ಮಾಡುವಂತಾಗಿದೆ.
ಉಪ್ಪಿನ ಬೆಟಗೇರಿ ಗ್ರಾಮದಲ್ಲೇ ಮೂರ್ನಾಲ್ಕು ಜನ ರೈತರ ಜಮೀನಿನ ಪಹಣಿ ಪತ್ರಿಕೆಯಲ್ಲಿ ಈ ರೀತಿ ನಮೂದಾಗಿದ್ದು, ರೈತರು ವಕ್ಫ ಕಚೇರಿ ಎದುರೇ ಧರಣಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ತಹಶೀಲ್ದಾರ ಕಚೇರಿಗೆ ಇದನ್ನು ತಿದ್ದುಪಡಿ ಮಾಡಲು ಅರ್ಜಿ ಕೊಟ್ಟರೂ ರೈತರಿಗೆ ಯಾವುದೇ ಸ್ಪಂದನೆ ದೊರೆಯದೇ ಇರುವುದರಿಂದ ರೈತರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ವಿಜಯಪುರದಲ್ಲೂ ಇದೇ ರೀತಿ ಆಗಿದ್ದು, ಇದೀಗ ಧಾರವಾಡದಲ್ಲೂ ವಕ್ಫ ಆಸ್ತಿ ನಮೂದಾಗಿರುವುದು ಕಂಡು ಬಂದಿದೆ. ಕೂಡಲೇ ಸರ್ಕಾರ ಮಧ್ಯಸ್ಥಿಕೆ ವಹಿಸಿ ರೈತರ ಜಮೀನನ್ನು ರೈತರಿಗೇ ಉಳಿಸಿಕೊಡಬೇಕಾಗಿದೆ.