ನವದೆಹಲಿ,ಏಪ್ರಿಲ್10: ಪ್ರಮುಖ ಬೆಳವಣಿಗೆಯಲ್ಲಿ ಆರ್‌ಬಿಐನಿಂದ ನಿರ್ಬಂಧಕ್ಕೊಳಗಾಗಿರುವ ಪೇಟಿಎಂ ಪೇಮೆಂಟ್ ಬ್ಯಾಂಕ್‌ನ (ಪಿಪಿಬಿಎಲ್) ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಸಿಇಒ ಹುದ್ದೆಗೆ ಸುರೀಂದರ್ ಚಾವ್ಲಾ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಂಗಳವಾರ ಕಂಪನಿಯು ಷೇರು ಪೇಟೆಗೆ ನೀಡಿದ ಮಾಹಿತಿಯಲ್ಲಿ ಇದನ್ನು ಉಲ್ಲೇಖಿಸಿದ್ದು, ವೈಯುಕ್ತಿಕ ಕಾರಣಗಳನ್ನು ನೀಡಿ ಸುರೀಂದರ್ ಚಾವ್ಲಾ ರಾಜಿನಾಮೆ ನೀಡಿದ್ದಾರೆ ಎನ್ನಲಾಗಿದೆ.
ಪಿಪಿಬಿಎಲ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು CEO, ಸುರೀಂದರ್ ಚಾವ್ಲಾ ಅವರು ವೈಯಕ್ತಿಕ ಕಾರಣಗಳಿಂದಾಗಿ ಏಪ್ರಿಲ್ 8, 2024 ರಂದು ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಪರಸ್ಪರ ಒಪ್ಪಿಗೆ ಹೊರತಾಗಿ ಅವರು, ಜೂನ್ 26, 2024 ರಂದು ತಮ್ಮ ಕರ್ತವ್ಯದಿಂದ ಬಿಡುಗಡೆಗೊಳ್ಳಲಿದ್ದಾರೆ ಎಂದು ಪೇಟಿಎಂನ ಪೋಷಕ One97 ಕಮ್ಯುನಿಕೇಷನ್ಸ್ ಷೇರು ಮಾರುಕಟ್ಟೆಗೆ ಮಾಹಿತಿ ನೀಡಿದೆ.
ರಾಜೀನಾಮೆ ಜೂನ್ 26 ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ಹೇಳಿದ್ದು, ಯಾವುದೇ ಸಂಭಾವ್ಯ ಉತ್ತರಾಧಿಕಾರಿಯ ಬಗ್ಗೆ ಸಂಸ್ಥೆ ಮಾಹಿತಿ ನೀಡಿಲ್ಲ.
ಈ ಹಿಂದೆ ಕೇಂದ್ರೀಯ ಬ್ಯಾಂಕ್ ಅಂದರೆ ಆರ್ ಬಿಐ ಪೇಟಿಎಂ ಪೇಮೆಂಟ್ ಬ್ಯಾಂಕ್ ಮೇಲೆ ನಿರ್ಬಂಧ ಹೇರಿತ್ತು. ಈ ಬೆಳವಣಿಗೆ ಬೆನಲ್ಲೇ ಸಂಸ್ಥೆಯ ಷೇರುಮೌಲ್ಯ ಪಾತಾಳಕ್ಕೆ ಕುಸಿದಿತ್ತು. ಇದರ ಬೆನ್ನಲ್ಲೇ ಸಂಸ್ಥೆಯ ಮುಖ್ಯಸ್ಥ ವಿಜಯ್ ಶೇಖರ್ ಶರ್ಮಾ ಸ್ಥಾನ ತ್ಯಜಿಸಿದ್ದರು. ಇದೀಗ ಸುರೀಂದರ್ ಚಾವ್ಲಾ ಕೂಡ ರಾಜೀನಾಮೆ ನೀಡಿದ್ದಾರೆ.