ಪಾಟ್ನಾ,ಜೂ.02: ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನ ಮುಗಿದ ಬೆನ್ನಲ್ಲೇ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಶನಿವಾರ ಗುಂಡಿನ ದಾಳಿ ನಡೆದಿದೆ.
ಮಾಹಿತಿಯ ಪ್ರಕಾರ, ಭಾರತೀಯ ಜನತಾ ಪಕ್ಷದ (ಬಿಜೆಪಿ) ಪಾಟಲಿಪುತ್ರ ಅಭ್ಯರ್ಥಿ ರಾಮ್ ಕೃಪಾಲ್ ಯಾದವ್ ಮೇಲೆ ಹಲ್ಲೆ ನಡೆದಿದೆ. ಗಾಯಗೊಂಡಿರು ಪಕ್ಷದ ಕಾರ್ಯಕರ್ತನನ್ನು ಭೇಟಿ ಮಾಡಲು ಮತ್ತು ಸ್ಥಳೀಯ ಬೂತ್‌ನಲ್ಲಿ ಮತದಾನ ಪ್ರಕ್ರಿಯೆಯನ್ನು ಪರಿಶೀಲಿಸಲು ಅವರು ಪಾಟ್ನಾದ ಮಸೌರ್ಹಿಗೆ ತೆರಳಿದ್ದರು. ಈ ಪ್ರದೇಶದಲ್ಲಿ ಯಾದವ್ ಅವರ ಕಾರಿನ ಮುಂದೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.
ಏಳನೇ ಹಂತದ ಮತದಾನದ ನಂತರ ಸಂಜೆ ತಡವಾಗಿ, ರಾಮಕೃಪಾಲ್ ಯಾದವ್ ಅವರು ಪಾಟ್ನಾದ ತಿನೇರಿ ಬೂತ್‌ನಿಂದ ಹಿಂತಿರುಗುತ್ತಿದ್ದರು. ಇವರೊಂದಿಗೆ ತಿನೇರಿಯ ಕೆಲ ಯುವಕರು ಬಂದಿದ್ದರು. ಮತ್ತಿಯಾ ಗ್ರಾಮದ ಸಮೀಪಕ್ಕೆ ಬರುತ್ತಿದ್ದಂತೆ ಅಪರಿಚಿತ ಯುವಕರು ಗುಂಡು ಹಾರಿಸಿದ್ದಾರೆ. ಈ ವೇಳೆ ತಿನೇರಿಯ ಯುವಕನ ತಲೆಗೆ ಗಾಯವಾಗಿದೆ ಎನ್ನಲಾಗಿದೆ. ಸಂಜೆ 6 ಗಂಟೆ ಸುಮಾರಿಗೆ ನಡೆದ ಈ ಹಿಂಸಾತ್ಮಕ ಘಟನೆಯು ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ.
ರಾಮ್ ಕೃಪಾಲ್ ಯಾದವ್ ಅವರ ಬೆಂಗಾವಲು ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ ಬಗ್ಗೆ ದೂರು ದಾಖಲಾಗಿದೆ ಎಂದು ಪಾಟ್ನಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ತಿಳಿಸಿದ್ದಾರೆ.