ಹೈದರಾಬಾದ್03: ವಿಮಾನಯಾನ ಸಂಸ್ಥೆಯೊಂದರ ಸರ್ವರ್ ಡೌನ್‌ನಿಂದಾಗಿ ಆ ಕಂಪನಿಗೆ ಸೇರಿದ ವಿಮಾನಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳದೇ ಹಾಗೆ ಹೊರಟು ಹೋಗಿರುವ ಘಟನೆ ಗುರುವಾರ ಬೆಳಗ್ಗೆ ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಪ್ರಯಾಣಿಕರ ಮಾಹಿತಿ ಪ್ರಕಾರ, ಪ್ರಯಾಣಿಕರು ದೇಶೀಯ ವಿಮಾನಗಳಲ್ಲಿ ಪ್ರಮುಖ ನಗರಗಳಿಗೆ ಹೋಗಲು ವಿಮಾನಯಾನ ಕಂಪನಿಯಿಂದ ಟಿಕೆಟ್ ಖರೀದಿಸಿದ್ದಾರೆ. ಕೆಲವರು ವಿಮಾನ ನಿಲ್ದಾಣವನ್ನು ತಲುಪಿ ವೆಬ್ ಚೆಕ್-ಇನ್ ಮಾಡಲು ಪ್ರಯತ್ನಿಸಿದ್ದಾರೆ ಕೂಡಾ. ಆದರೆ, ಸರ್ವರ್ ಸರಿಯಾಗಿ ಕೆಲಸ ಮಾಡಲಿಲ್ಲ. ಕೈಯಲ್ಲಿ ಟಿಕೆಟ್ ಇದ್ದರೂ ಪ್ರಯಾಣಿಕರ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣಕ್ಕೆ ಸಿಬ್ಬಂದಿ ಅವರನ್ನು ಗೇಟ್ ಒಳಗೆ ಬಿಡಲಿಲ್ಲ. ತಾಳ್ಮೆ ಕಳೆದುಕೊಂಡ ಕೆಲವರು ತಾವು ಎದುರಿಸುತ್ತಿರುವ ಕಷ್ಟಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ತಡವಾಗಿ ಪ್ರತಿಕ್ರಿಯಿಸಿದ ಮ್ಯಾನೇಜ್‌ಮೆಂಟ್ ಇತರ ಸೇವೆಗಳಲ್ಲಿ ಅವರವರ ಸ್ಥಳಗಳಿಗೆ ಕಳುಹಿಸುವುದಾಗಿ ಭರವಸೆ ನೀಡಿದಾಗ ಪ್ರಯಾಣಿಕರು ಶಾಂತರಾದರು. ಈ ಕುರಿತು ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸಮಸ್ಯೆ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಸರ್ವರ್ ಸಮಸ್ಯೆಯನ್ನು ಸರಿಪಡಿಸುವ ಜವಾಬ್ದಾರಿ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳದ್ದಾಗಿದೆ ಎಂದು ಹೇಳಲಾಗಿದೆ.