ಪಂಚ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿ: ಕೆ.ಇ.ಚಿದಾನಂದಪ್ಪ

Ravi Talawar
ಪಂಚ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿ: ಕೆ.ಇ.ಚಿದಾನಂದಪ್ಪ
WhatsApp Group Join Now
Telegram Group Join Now
ಬಳ್ಳಾರಿ,ಸೆ.09.ಕರ್ನಾಟಕ ರಾಜ್ಯದಲ್ಲಿ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ದೇಶದಲ್ಲಿಯೇ ಮಾದರಿ ಯೋಜನೆಗಳಾಗಿವೆ ಎಂದು ಬಳ್ಳಾರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಹೇಳಿದರು.
‘ಗ್ಯಾರಂಟಿ ನಡೆ ಗ್ರಾಮ ಪಂಚಾಯತಿ ಕಡೆ’ ಕಾರ್ಯಕ್ರಮದಡಿ ಕುರುಗೋಡು ತಾಲ್ಲೂಕಿನ ಸೋಮಸಮುದ್ರ ಗ್ರಾಮದ ಗ್ರಾಪಂ ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಂಚ ಗ್ಯಾರಂಟಿ ಯೋಜನೆಗಳ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಜನಸಾಮಾನ್ಯರಿಗೆ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸಬೇಕು ಎಂಬ ಮಹಾದಾಸೆಯಾಗಿದ್ದು, ಅವರ ಆದೇಶದಂತೆ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಹೆಚ್.ಎಂ.ರೇವಣ್ಣ ಮತ್ತು ಉಪಾಧ್ಯಕ್ಷ ಮೆಹರೋಜ್ ಖಾನ್ ಅವರ ನಿರ್ದೇಶನ ಮೂಲಕ ಗ್ರಾಪಂ ಮಟ್ಟದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವಲ್ಲಿ ಆಗುವ ಲೋಪದೋಷಗಳ ಕುರಿತು ಚರ್ಚಿಸಲು ಗ್ಯಾರಂಟಿ ನಡೆ ಗ್ರಾಮ ಪಂಚಾಯತಿ ಕಡೆ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳಿಗೆ ಸಾಕಷ್ಟು ಅನುದಾನ ಖರ್ಚು ಮಾಡಿದ್ದರೂ ಅಭಿವೃದ್ಧಿ ಯೋಜನೆಗಳಿಗೆ ಹಣದ ಕೊರತೆ ಆಗದಂತೆ ಸರ್ಕಾರ ಕ್ರಮ ಕೈಗೊಂಡಿದೆ. ಇಂತಹ ಜನಪ್ರಿಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮ ಮಾಡಿ ಗ್ಯಾರಂಟಿ ಯೋಜನೆಗಳ ಕುರಿತಾಗಿ ಅಲ್ಲಿಯ ಜನರ ದೂರು ಸ್ವೀಕರಿಸಿ, ಸ್ಥಳದಲ್ಲಿಯೇ ಸೂಕ್ತ ಪರಿಹಾರ ನೀಡಲು ಸರ್ಕಾರ ಮುತುವರ್ಜಿ ವಹಿಸಿದೆ. ಈ ಯೋಜನೆಗಳಡಿ ಕೇವಲ ಮಹಿಳೆಯರಷ್ಟೇ ಫಲಾನುಭವಿಗಳಾಗಿಲ್ಲ, ಪರೋಕ್ಷವಾಗಿ ಪುರುಷರೂ ಸಹ ಫಲಾನುಭವಿಗಳಾಗಿದ್ದಾರೆ ಎಂದರು.
ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷಿö್ಮ-ಶೇ.98., ಅನ್ನಭಾಗ್ಯ-ಶೇ.99., ಮತ್ತು ಶಕ್ತಿ, ಯುವನಿಧಿ, ಗೃಹಜ್ಯೊತಿ ಯೋಜನೆಗಳು ಶೇಕಡಾ ನೂರಕ್ಕೆ ನೂರರಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಕುರುಗೋಡು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಜಿ.ಬಸವನಗೌಡ ಅವರು ಮಾತನಾಡಿ, ಕುರುಗೋಡು ತಾಲ್ಲೂಕಿನಲ್ಲಿ ಶಕ್ತಿ ಯೋಜನೆಯಡಿ 219 ಕೋಟಿ ರೂ., ಅನ್ನಭಾಗ್ಯ ಯೋಜನೆಯಡಿ 26.07 ಕೋಟಿ ರೂ., ಗೃಹಲಕ್ಷಿö್ಮ ಯೋಜನೆಯಡಿ 294 ಕೋಟಿ ರೂ., ಗೃಹಜ್ಯೋತಿ ಯೋಜನೆಯಡಿ 340 ಕೋಟಿ ರೂ. ಮತ್ತು ಯುವನಿಧಿ ಯೋಜನೆಯಡಿ 95.35 ಲಕ್ಷ ರೂ. ಅನುದಾನ ಪಾವತಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಂಚ ಗ್ಯಾರಂಟಿ ಯೋಜನೆ ಫಲಾನುಭವಿಗಳ ಕುಂದು-ಕೊರತೆ ಸಂವಾದ ನಡೆಸಲಾಯಿತು.
ಈ ಸಂದರ್ಭದಲ್ಲಿ ಕುರುಗೋಡು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಾರ್ಯದರ್ಶಿ ಹಾಗೂ ಕುರುಗೋಡು ತಾಪಂ ಇಒ ಕೆ.ವಿ.ನಿರ್ಮಲ, ಸೋಮಸಮುದ್ರ ಗ್ರಾಪಂ ಅಧ್ಯಕ್ಷರಾದ ರಾಜೇಶ್ವರಿ, ಉಪಾಧ್ಯಕ್ಷರಾದ ಲಕ್ಷಿö್ಮ, ಸದಸ್ಯರಾದ ಮಂಜುನಾಥ, ಬಸವರಾಜ ಗೊರವರ, ಶಕುಂತಲ ಹಾಗೂ ಇತರರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article