ಕಡ್ಡಾಯ ಶೌಚಾಲಯ ಬಳಕೆಗೆ ಪಣತೊಡಿ- ಇಓ ಇನಾಮದಾರ ಅಭಿಮತ

Ravi Talawar
ಕಡ್ಡಾಯ ಶೌಚಾಲಯ ಬಳಕೆಗೆ ಪಣತೊಡಿ- ಇಓ ಇನಾಮದಾರ ಅಭಿಮತ
WhatsApp Group Join Now
Telegram Group Join Now

ನರಗುಂದ:ಕನಕಿಕೊಪ್ಪ ಗ್ರಾಮೀಣ ಪ್ರದೇಶಗಳಲ್ಲಿ ಶುಚಿತ್ವ ಕಾಪಾಡಬೇಕಾದರೆ ಪ್ರತಿಯೊಂದು ಮನೆಯು ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಸ್ವಚ್ಛಭಾರತ್ ಯೋಜನೆ ಹಾಗೂ ನರೇಗಾ ಯೋಜನೆಯಡಿ ಪ್ರತಿ ಮನೆಗೆ ಶೌಚಾಲಯ ನಿರ್ಮಾಣಕ್ಕೆ ಗ್ರಾಮ ಪಂಚಾಯತ ಕ್ರಮ ಕೈಗೊಳ್ಳುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಗ್ರಾಮವನ್ನು ಸ್ವಚ್ಛತೆ ಮಾಡಿದಾಗ ಮಹಾತ್ಮ ಗಾಂಧಿಜೀ ಅವರು ಕಂಡ ಗ್ರಾಮ ಸ್ವರಾಜ್ ಕನಸು ಈಡೇರುತ್ತದೆ ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ.ಇನಾಮದಾರ ಹೇಳಿದರು.

ಜಿಲ್ಲಾ ಪಂಚಾಯತ  ಮತ್ತು ತಾಲೂಕು ಪಂಚಾಯತ ನರಗುಂದ ಹಾಗೂ ಕನಕೀಕೊಪ್ಪ ಗ್ರಾಮ ಪಂಚಾಯತ ಸಂಯುಕ್ತಾಶ್ರಯದಲ್ಲಿ ಗ್ರಾಮದ ಎನ್.ಸಿ.ಕೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಸ್ವಚ್ಚತಾ ಹೀ ಸೇವೆ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಡಿದರು.

ಗ್ರಾಮೀಣ ಪ್ರದೇಶದಲ್ಲಿ ಅಗತ್ಯತೆಗೆ ತಕ್ಕಷ್ಟೇ ಮಾತ್ರ ನೀರನ್ನು ಬಳಕೆ ಮಾಡಬೇಕು. ಅಗತ್ಯತೆ ಮೀರಿ ನೀರನ್ನು ಬಳಕೆ ಮಾಡಿ ಪೋಲು ಮಾಡಿ ಹರಿಬಿಡುವುದರಿಂದ ಗ್ರಾಮದ ವಾತಾವರಣ ಮಲೀನತೆಗೆ ಕಾರಣವಾಗುತ್ತದೆ. ಇದರಿಂದ ಗ್ರಾಮದಲ್ಲಿ ಕೀಟಾಣುಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡಿ ಪರಿಸರ ಮಾಲಿನ್ಯತೆ ಉಂಟಾಗುತ್ತದೆ. ಆದರಿಂದ ನೀರನ್ನು ಮಿತವಾಗಿ ಬಳಸಿ ಮಲ ವಿಸರ್ಜನೆಗೆ ಮನೆಯಲ್ಲಿ ಕಡ್ಡಾಯವಾಗಿ ಶೌಚಾಲಯವನ್ನು ನಿರ್ಮಿಸಿಕೊಳ್ಳಿ ಎಂದು ಶಾಲಾ ಮಕ್ಕಳಲ್ಲಿ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಶಾಲಾ ಹೆಣ್ಣು ಮಕ್ಕಳು ಬಂಗಾರ ಬೇಕು, ಬಟ್ಟೆ ಬೇಕು ಅಂತ ಹಠ ಮಾಡುವುದಕ್ಕಿಂತ ಮನೆಗೊಂದು ಶೌಚಾಲಯ ಕಟ್ಟಿಸಿ ಅಂತ ಪಾಲಕರಲ್ಲಿ ಹಠ ಮಾಡಿ. ಅಂದಾಗ ಮನೆಗೊಂದು ಶೌಚಾಲಯ ನಿರ್ಮಾಣ ಸಾಧ್ಯವಾಗುತ್ತದೆ. ಈ ಮೂಲಕ ಬಯಲು ಮಲ ವಿಸರ್ಜನೆ ಮುಕ್ತ ಗ್ರಾಮಕ್ಕೆ ನೆರವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ  ತಾಲೂಕು ಪಂಚಾಯತ ಸಹಾಯಕ ನಿರ್ದೇಶಕರಾದ  ಶ್ರೀಮತಿ ಕೃಣ್ಣಮ್ಮ ಹಾದಿಮನಿ,  ಮಾತನಾಡಿ, ಸ್ವಚ್ಚತಾ ಹೀ ಸೇವಾ ಆಂದೋಲನವನ್ನು ಪ್ರತಿ ವರ್ಷದಂತೆ ಈ ವರ್ಷವೂ ಆಚರಣೆ ಮಾಡುತ್ತಿದ್ದು, ನಿರಂತರವಾಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 15 ದಿನಗಳ ಕಾಲ ಸ್ವಚ್ಛತಾ ದೃಷ್ಟಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಶಾಲಾ ಮಕ್ಕಳಲ್ಲೂ ಶುಚಿತ್ವ ಜಾಗೃತಿಗಾಗಿ ಸ್ಪರ್ಧೇಗಳನ್ನು ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಶಾರದಾ ಹಳೇಮನಿ ಮತ್ತು ಸಮುದಾಯ ಆರೋಗ್ಯಾಧಿಕಾರಿ ರವಿ ವಾಲ್ಮೀಕಿ ಮಾತನಾಡಿ, ವೈಯಕ್ತಿಕ ಸ್ವಚ್ಛತೆ ಹಾಗೂ ಶುಚಿತ್ವದಿಂದ ಕೈ ತೊಳೆಯುವ ವಿಧಾನದ ಬಗ್ಗೆ ಶಾಲಾ ಮಕ್ಕಳಲ್ಲಿ ತಿಳುವಳಿಕೆ ಮೂಡಿಸಿದರು.

ಕಾರ್ಯಕ್ರಮ ಬಳಿಕ ಶಾಲಾ ಮಕ್ಕಳಿಗೆ ಮತ್ತು ಕಾರ್ಯಕ್ರಮದಲ್ಲಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಶುಚಿತ್ವಕ್ಕಾಗಿ ಪ್ರತಿಜ್ಞಾವಿಧಿಯನ್ನು ತಾಲೂಕು ಪಂಚಾಯತ ಐಇಸಿ ಸಂಯೋಜಕರು ಸುರೇಶ ಬಾಳಿಕಾಯಿ ಭೋಧಿಸಿದರು.

ಕಾರ್ಯಕ್ರಮದಲ್ಲಿ   ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶ್ರೀಮತಿ ಎಸ್,ಎ,ಬಡಿಗೇರ, ಗ್ರಾಮ ಪಂಚಾಯತ ಸದಸ್ಯರಾದ ಶ್ರೀಮತಿ ಎಮ್,ಎಸ್,ದೊಡಮನಿ, ಕನಕರೆಡ್ಡಿ ಗಿರಡ್ಡಿ, ಶ್ರೀಮತಿ ವೆಂಕಮ್ಮ ಮಾದರ,ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ರಮೇಶಗೌಡ ರಾಯನಗೌಡರ , ಮುಖ್ಯೋಪಾಧ್ಯಾಯರು ಶ್ರೀಮತಿ ಎಸ್.ಪಿ ಹಿರೇಮನಿ, ಕನಕಿಕೊಪ್ಪ  ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿ ವರ್ಗ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರು ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article