ಇಸ್ಲಾಮಾಬಾದ್,23: ಕಾಶ್ಮೀರ ವಿಚಾರದಲ್ಲಿ ಇರಾನ್ ಬೆಂಬಲ ಪಡೆಯುವ ಪಾಕಿಸ್ತಾನದ ಪ್ರಯತ್ನ ಮತ್ತೊಮ್ಮೆ ವಿಫಲವಾಗಿದ್ದು, ಪಾಕಿಸ್ತಾನ ಸರ್ಕಾರ ತೀವ್ರ ಮುಜುಗರಕ್ಕೀಡಾಗಿದೆ. ಸೋಮವಾರ ಪಾಕಿಸ್ತಾನ ಭೇಟಿಗೆ ಆಗಮಿಸಿದ್ದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಕಾಶ್ಮೀರ ವಿಷಯದಲ್ಲಿ ಏನನ್ನೂ ಮಾತನಾಡದೇ ಇರುವುದು ಪಾಕಿಸ್ತಾನಕ್ಕೆ ಇರಿಸು ಮುರುಸು ಉಂಟು ಮಾಡಿತು. ಇರಾನ್ ಅಧ್ಯಕ್ಷರು ಮೂರು ದಿನಗಳ ಪಾಕಿಸ್ತಾನ ಭೇಟಿಗಾಗಿ ಸೋಮವಾರ ಇಸ್ಲಾಮಾಬಾದ್ಗೆ ಆಗಮಿಸಿದ್ದಾರೆ.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಆರಂಭಿಕ ಹೇಳಿಕೆಯನ್ನು ನೀಡಿದ ಪ್ರಧಾನಿ ಷರೀಫ್, ಇಸ್ಲಾಮಾಬಾದ್ ಮತ್ತು ನವದೆಹಲಿ ನಡುವಿನ ಕಾಶ್ಮೀರ ವಿವಾದದಲ್ಲಿ ಪಾಕಿಸ್ತಾನದ ಪರವಾಗಿ ನಿಂತಿದ್ದಕ್ಕಾಗಿ ಇರಾನ್ ಅಧ್ಯಕ್ಷರಿಗೆ ಧನ್ಯವಾದ ಅರ್ಪಿಸಿದರು. “ಕಾಶ್ಮೀರ ವಿಷಯದಲ್ಲಿ ಇರಾನ್ ನೀಡಿದ ಬೆಂಬಲಕ್ಕಾಗಿ ನಾವು ಕೃತಜ್ಞರಾಗಿದ್ದೇವೆ.” ಎಂದು ಷರೀಫ್ ಹೇಳಿದರು.
ಆದರೆ ಇರಾನ್ ಅಧ್ಯಕ್ಷ ರೈಸಿ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇಸ್ರೇಲ್ – ಪ್ಯಾಲೆಸ್ಟೈನ್ ಸಂಘರ್ಷದ ಬಗ್ಗೆ ಮಾತ್ರ ತಮ್ಮ ಭಾಷಣದಲ್ಲಿ ಮಾತನಾಡಿದರು. ಅಧ್ಯಕ್ಷ ರೈಸಿ ಒಂದೇ ಒಂದು ಬಾರಿಯೂ ಕಾಶ್ಮೀರ ಶಬ್ದವನ್ನು ಪ್ರಸ್ತಾಪಿಸಲಿಲ್ಲ. ಹೀಗಾಗಿ ಇರಾನ್ ಬೆಂಬಲದ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನಕ್ಕೆ ನಿರಾಸೆ ಎದುರಾಯಿತು.
ಪ್ರಾದೇಶಿಕ ಮತ್ತು ಜಾಗತಿಕ ದೇಶಗಳಿಂದ ಕಾಶ್ಮೀರ ವಿವಾದದ ಬಗ್ಗೆ ಬೆಂಬಲ ಗಳಿಸಲು ಪದೇ ಪದೆ ಪ್ರಯತ್ನಿಸುತ್ತಿರುವ ಇಸ್ಲಾಮಾಬಾದ್ಗೆ ಇರಾನ್ ಅಧ್ಯಕ್ಷರ ಹೇಳಿಕೆಯು ಸ್ಪಷ್ಟ ಹಿನ್ನಡೆ ಎಂದು ಪರಿಗಣಿಸಲಾಗಿದೆ.
“ಇರಾನ್ ಮತ್ತು ಭಾರತದ ನಡುವಿನ ಉತ್ತಮ ಸಂಬಂಧವನ್ನು ಪಾಕಿಸ್ತಾನವು ಸರಿಯಾಗಿ ತಿಳಿದುಕೊಳ್ಳಬೇಕು. ಸದ್ಯ ಇರಾನ್ ಇಸ್ರೇಲ್ನೊಂದಿಗಿನ ಸಂಘರ್ಷದ ಬಗ್ಗೆ ಮುಖ್ಯವಾಗಿ ಗಮನ ಹರಿಸುತ್ತಿರುವುದು ತಿಳಿದಿರುವ ವಿಚಾರ. ಹೀಗಾಗಿ ಪಾಕಿಸ್ತಾನದ ಪ್ರಧಾನಿಗಳು ಇರಾನ್ ಎದುರು ಕಾಶ್ಮೀರ ವಿಷಯ ಪ್ರಸ್ತಾಪಿಸುವ ಮುನ್ನ ಜಾಗರೂಕವಾಗಿರಬೇಕಿತ್ತು. ಕಾಶ್ಮೀರ ವಿವಾದದ ಬಗ್ಗೆ ಬೆಂಬಲಿತ ನಿಲುವಿಗಾಗಿ ನಮ್ಮ ಪ್ರಧಾನಿ ಇರಾನಿನ ಅಧ್ಯಕ್ಷರಿಗೆ ಧನ್ಯವಾದ ಅರ್ಪಿಸಿದ್ದನ್ನು ನೋಡಿ ಮುಜುಗರವಾಯಿತು. ಈ ನಿಲುವಿನ ಬಗ್ಗೆ ರೈಸಿ ಏನೂ ಹೇಳಿಲಿಲ್ಲ” ಎಂದು ರಾಜಕೀಯ ವಿಶ್ಲೇಷಕ ಅಬ್ದುಲ್ಲಾ ಮೊಮಂಡ್ ಹೇಳಿದ್ದಾರೆ.
ಇರಾನ್ ಅಧ್ಯಕ್ಷರಿಂದ ಕಾಶ್ಮೀರದ ಬಗ್ಗೆ ಯಾವುದೇ ಹೇಳಿಕೆಯನ್ನು ಪಡೆಯಲು ಪಾಕಿಸ್ತಾನ ವಿಫಲವಾದರೂ, ದ್ವಿಪಕ್ಷೀಯ ವ್ಯಾಪಾರವನ್ನು ಕನಿಷ್ಠ 10 ಬಿಲಿಯನ್ ಡಾಲರ್ಗೆ ಹೆಚ್ಚಿಸಲು ಎರಡೂ ದೇಶಗಳು ಒಪ್ಪಿಕೊಂಡವು. ವ್ಯಾಪಾರ ಮತ್ತು ಅಭಿವೃದ್ಧಿಯ ವಲಯದಲ್ಲಿ ಪರಸ್ಪರ ಸಹಕಾರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಕನಿಷ್ಠ 10 ತಿಳಿವಳಿಕೆ ಒಪ್ಪಂದಗಳಿಗೆ ಉಭಯ ದೇಶಗಳ ನಡುವೆ ಸಹಿ ಹಾಕಲಾಯಿತು.