ನವದೆಹಲಿ, ಮೇ 9: ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನಂತರ ಭಾರತ ಮತ್ತು ಪಾಕಿಸ್ತಾನ ಸೇನಾ ಪಡೆಗಳ ನಡುವೆ ದಾಳಿ ಹಾಗೂ ಪ್ರತಿ ದಾಳಿ ಹೆಚ್ಚಾಗಿದೆ. ಈ ಬಗ್ಗೆ ಸುದ್ದಿವಾಹಿನಿಗಳಲ್ಲಿ ನಿರಂತರ ನೇರ ಪ್ರಸಾರ ಮಾಡಲಾಗುತ್ತಿದೆ. ಇದನ್ನು ನಿಲ್ಲಿಸುವಂತೆ ರಕ್ಷಣಾ ಸಚಿವಾಲಯ ಸೂಚನೆ ನೀಡಿದೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಸಂದೇಶ ಕಳುಹಿಸಿರುವ ರಕ್ಷಣಾ ಇಲಾಖೆ, ಭಾರತೀಯ ಸೇನೆಯ ಸಿಬ್ಬಂದಿಯ ಜೀವಕ್ಕೆ ಅಪಾಯ ಎದುರಾಗಬಹುದಾದ ಸಾಧ್ಯತೆ ಇರುವುದರಿಂದ ಈ ಸೂಚನೆ ನೀಡಲಾಗಿದೆ ಎಂದಿದೆ.
ಎಲ್ಲಾ ಮಾಧ್ಯಮ ವಾಹಿನಿಗಳು, ಡಿಜಿಟಲ್ ವೇದಿಕೆಗಳು ಮತ್ತು ಇತರರು ರಕ್ಷಣಾ ಕಾರ್ಯಾಚರಣೆಗಳು ಮತ್ತು ಭದ್ರತಾ ಪಡೆಗಳ ಚಲನವಲನಗಳ ನೇರ ಪ್ರಸಾರ ಅಥವಾ ರಿಯಲ್ ಟೈಮ್ ರಿಪೋರ್ಟ್ ಮಾಡುವುದನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ. ಅಂತಹ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸುವುದು ಕಾರ್ಯಾಚರಣೆಯ ಪರಿಣಾಮಕಾರಿತ್ವಕ್ಕೆ ಅಪಾಯ ಉಂಟುಮಾಡಬಹುದು ಮತ್ತು ಸೇನಾ ಸಿಬ್ಬಂದಿ ಜೀವಗಳಿಗೆ ಅಪಾಯವನ್ನು ಉಂಟುಮಾಡಬಹುದು ಎಂದು ರಕ್ಷಣಾ ಇಲಾಖೆ ಹೇಳಿದೆ.