ನವದೆಹಲಿ, ಮೇ 15: ಮೊದಲ ಬಾರಿಗೆ ಭಾರತದೊಂದಿಗೆ ಚರ್ಚೆಯ ಮೂಲಕ ಪ್ರಸ್ತಾಪ ತಂದಿರುವ ಪಾಕಿಸ್ತಾನ ಸಿಂಧೂ ಜಲ ಒಪ್ಪಂದದ ಅಮಾನತನ್ನು ಮರುಪರಿಶೀಲಿಸಿ ಎಂದು ಭಾರತಕ್ಕೆ ಮನವಿ ಸಲ್ಲಿಸಿದೆ. ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿತ್ತು. ಇದರಿಂದ ಪಾಕಿಸ್ತಾನದಲ್ಲಿ ನೀರಿನ ಬಿಕ್ಕಟ್ಟು ತಲೆದೋರಿದೆ. ಕದನವಿರಾಮ ಘೋಷಣೆಯಾದರೂ ಪಾಕಿಸ್ತಾನ ಭಯೋತ್ಪಾದನೆಗೆ ನೀಡುವ ಬೆಂಬಲವನ್ನು ಪೂರ್ತಿಯಾಗಿ ನಿಲ್ಲಿಸುವವರೆಗೂ ಸಿಂಧೂ ಜಲ ಒಪ್ಪಂದ ರದ್ದಾಗಿರುತ್ತದೆ ಎಂದು ಭಾರತ ಖಚಿತಪಡಿಸಿದ್ದಕ್ಕೆ ಮೊದಲು ಪಾಕಿಸ್ತಾನ ಅಹಂಕಾರದ ಮಾತುಗಳನ್ನಾಡಿತ್ತು. ಭಾರತ ಸಿಂಧೂ ಜಲ ಒಪ್ಪಂದ ಅಮಾನತನ್ನು ಕೈಬಿಡದಿದ್ದರೆ ಕದನವಿರಾಮಕ್ಕೆ ಯಾವುದೇ ಅರ್ಥವಿರುವುದಿಲ್ಲ, ನಮಗೆ ನೀರು ಬಿಡದಿದ್ದರೆ ಅದನ್ನು ಹೇಗೆ ಪಡೆಯಬೇಕೆಂಬುದು ನಮಗೆ ಗೊತ್ತಿದೆ ಎಂದು ಪಾಕ್ ಹೇಳಿಕೆ ನೀಡಿತ್ತು. ಅದಕ್ಕೂ ಭಾರತ ಜಗ್ಗದಿದ್ದಾಗ ಇದೀಗ ಮಾತುಕತೆಯ ಮೂಲಕ ಭಾರತದ ಮನವೊಲಿಸಲು ಮುಂದಾಗಿದೆ. ಈ ವಿಚಾರದ ಬಗ್ಗೆ ಭಾರತದ ಜೊತೆ ಚರ್ಚಿಸಲು ಪಾಕಿಸ್ತಾನ ಸಿದ್ಧ ಎಂದು ಹೇಳಿದೆ.