ನಟ,ನಿರ್ಮಾಪಕ ಬಿ.ಗುರುಪ್ರಸಾದ್ ಒಡೆತನದ ಪ್ರತಿಷ್ಠಿತ ಪಿ.ವಿ.ಫಿಲಂ ಇನ್ಸಿಟ್ಯೂಟ್ ಸಂಸ್ಥೆಯು ಸಿನಿಮಾಸಕ್ತರಿಗೆ ಎಲ್ಲಾ ವಿಭಾಗಗಳಲ್ಲಿ ಯಶಸ್ವಿಯಾಗಿ ತರಭೇತಿ ನೀಡುತ್ತಿದೆ. ಅಲ್ಲದೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ಅವಕಾಶಗಳನ್ನು ಕೊಡಿಸುತ್ತಿದ್ದಾರೆ. ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.
ಈ ಹಿನ್ನಲೆಯಲ್ಲಿ ಮೊದಲ ಪ್ರಯತ್ನ ಎನ್ನುವಂತೆ ’ಗೆಲುವಿನ ಹೆಜ್ಜೆ’ ಚಿತ್ರದ ಮುಹೂರ್ತ ಸಮಾರಂಭ ಮತ್ತು ಪ್ರಾಂಶುಪಾಲರಾದ ಹಿರಿಯ ನಟಿ ರೇಖಾದಾಸ್ ಹುಟ್ಟುಹಬ್ಬದ ಸಂಭ್ರಮವು ಸಂಸ್ಥೆಯ ಆವರಣದಲ್ಲಿ ಅದ್ದೂರಿಯಾಗಿ ನಡೆಯಿತು.
ತಂದೆ,ತಾಯಿ ಹಾಗೂ ಮಗ ಅಭಿನಯಿಸಿದ ಪ್ರಥಮ ದೃಶ್ಯಕ್ಕೆ ಪ್ರಿಯಾಂಕ ಉಪೇಂದ್ರ ಕ್ಲಾಪ್, ಬಿಗ್‌ಬಾಸ್ ವಿಜೇತ ಪ್ರಥಮ್ ಆಕ್ಷನ್, ಹಿರಿಯ ನಟ ಬ್ಯಾಂಕ್ ಜನಾರ್ಧನ್ ಕ್ಯಾಮಾರ ಆನ್ ಮಾಡಿದರು. ಬಾಗಲುಗುಂಟೆ ಠಾಣೆ ಇನ್ಸ್‌ಪೆಕ್ಟರ್ ಹನುಮಂತರಾಜು, ಸಬ್ ಇನ್ಸ್‌ಪೆಕ್ಟರ್ ರಾಜಣ್ಣ, ಅಹಿಂದಾ ನಾಯಕಿ-ರಾಜ್ಯ ಮಹಿಳಾ ಕಾಂಗ್ರೇಸ್ ಕಾರ್ಯದರ್ಶಿ ಭಾಗ್ಯಶ್ರೀಬಾಬಣ್ಣ ಮುಂತಾದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಿಯಾಂಕ ಉಪೇಂದ್ರ “ಶಾಲೆಯ ವಾತಾವರಣ ತುಂಬ ಖುಷಿ ನೀಡಿದೆ. ಪ್ರಥಮ್ ನೋಡಿದರೆ ನಮಗೆ 100 ಪರ್ಸೆಂಟ್ ಎನರ್ಜಿ ಸಿಗುತ್ತದೆ. ರೇಖಾದಾಸ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದೇನೆ. ಅವರ ಒಳ್ಳೆತನ ಇಂದಿಗೂ ಉಳಿಸಿಕೊಂಡಿದ್ದಾರೆ. ಸೆಟ್‌ನಲ್ಲಿ ಅವರೊಂದಿಗೆ ಸಾಕಷ್ಟು ಕಲಿತಿದ್ದೇನೆ. ಇಂತಹ ಶಾಲೆಗಳು ಮುಖ್ಯವಾಗಿರುತ್ತದೆ. ಈಗ ಚಿತ್ರರಂಗ ಬದಲಾವಣೆ ಆಗಿದೆ. ಸಿನಿಮಾದಲ್ಲಿ ಯಾರಿಗೆ ನಟನೆ ಮಾಡಬೇಕೆಂಬ ಆಸೆ ಇದೆ. ಅವರಿಗೂ ಇಲ್ಲಿ ತುಂಬ ಅನುಕೂಲ ಆಗುತ್ತದೆಂದು ನಂಬುತ್ತೇನೆ. ನಮ್ಮ ಕಾಲದಲ್ಲಿ ಸೋಷಿಯಲ್ ಮೀಡಿಯಾ ಇರಲಿಲ್ಲ. ಇಂದು ತಂತ್ರಜ್ಞಾನ ತುಂಬಾ ಬೆಳೆದಿದೆ. ತರಬೇತಿ ಜತೆಗೆ ಶಿಕ್ಷಣದ ಬಗ್ಗೆ ಗಮನ ಕೊಡಿ, ಮೊಬೈಲ್‌ನಿಂದ ದೂರ ಇರಿ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
“ಪ್ರಿಯಾಂಕ ಮೇಡಂ ಬಹಳಷ್ಟು ಒಳ್ಳೋಳ್ಳೆ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಮಿಸ್ ನಂದಿನಿ ಸಿನಿಮಾ. ನಂದಿನಿ ಹಾಲು ಪ್ಯೂರಿಟಿಗೆ ಕಡಿಮೆ ಇಲ್ಲ. ಅವರು ಸಿನಿಮಾವನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಉಪೇಂದ್ರರವರ ಸಿನಿಮಾಗಳು ಮೈಂಡ್ ಸೆಟ್ಟರ್. ಅವರ ಪಾತ್ರಗಳೇ ಇಂದಿನವರಿಗೆ ಸ್ಪೂರ್ತಿಯಾಗಿದೆ. ಮೇಡಂ ಮದುವೆಗೆ ಮುಂಚೆ ದೊಡ್ಡ ನಾಯಕರುಗಳೊಂದಿಗೆ ನಟಿಸಿರುವ ಚಿತ್ರಗಳು ಸೂಪರ್ ಹಿಟ್ ಆಗಿದೆ. ಅವರಲ್ಲಿ ಶಾರದೆ, ಗ್ಲಾಮರ್, ವಿನಯ ಇರುವುದಕ್ಕೆ ಇವತ್ತು ಸ್ಟಾರ್ ಆಗಿದ್ದಾರೆ. ಆ ಕಾರಣಕ್ಕೆ ಅವರನ್ನು ಅಷ್ಟು ಗೌರವಿಸುತ್ತೇನೆ” ಎಂದರು ಪ್ರಥಮ್.