ಪೌರಕಾರ್ಮಿಕರಿಲ್ಲದೆ ಸಮಾಜ ಸ್ವಚ್ಛತೆ ಕಾಣಲು ಸಾಧ್ಯವಿಲ್ಲ- ಪಿ. ರಘು

Hasiru Kranti
ಪೌರಕಾರ್ಮಿಕರಿಲ್ಲದೆ ಸಮಾಜ ಸ್ವಚ್ಛತೆ ಕಾಣಲು ಸಾಧ್ಯವಿಲ್ಲ- ಪಿ. ರಘು
WhatsApp Group Join Now
Telegram Group Join Now
ಕೊಪ್ಪಳ ̧ಜ̤ 07 : ಪೌರ ಕಾರ್ಮಿಕರ ಕೆಲಸ ಸಾಮಾನ್ಯವಾದದ್ದಲ್ಲ, ಸ್ವಚ್ಛತಾ ಸಿಬ್ಬಂದಿಗಳು ವಿಶೇಷವಾಗಿ ಸಫಾಯಿ ಕರ್ಮಚಾರಿಗಳು ಮತ್ತು ಪೌರಕಾರ್ಮಿಕರಿಲ್ಲದೆ ಸಮಾಜ ಸ್ವಚ್ಛತೆ ಕಾಣಲು ಸಾಧ್ಯವಿಲ್ಲವೆಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಪಿ. ರಘು ಹೇಳಿದರು.
ಅವರ ಬುಧವಾರ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶ, ಕೊಪ್ಪಳ ಇವರ ಸಹಯೋಗದಲ್ಲಿ ಪೌರಕಾರ್ಮಿಕರು ಮತ್ತು ಇತರೆ ಸ್ಥಳೀಯ ಸ್ವಚ್ಛತಾ ಕಾರ್ಮಿಕರೊಂದಿಗೆ ಹಮ್ಮಿಕೊಂಡಿದ್ದ ನೇರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ, ನೈರ್ಮಲ್ಯ ಸೇವೆಗಳನ್ನು ನಿರ್ವಹಿಸುವ ಪೌರ ಕಾರ್ಮಿಕರ ಕೆಲಸ ಎಲ್ಲರಿಂದಲೂ ಮಾಡಲು ಸಾಧ್ಯವಿಲ್ಲ. ಸ್ವಚ್ಛತಾ ರಕ್ಷಕರಾಗಿರುವ ಇವರ ಸೇವೆಯಿಂದ ನಾವೆಲ್ಲರೂ ಆರೋಗ್ಯವಾಗಿರಲು ಸಾಧ್ಯವಾಗುತ್ತಿದೆ. ಹಾಗಾಗಿ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಪೌರಕಾರ್ಮಿಕರು, ಸಫಾಯಿ ಕಾರ್ಮಚಾರಿಗಳು ಹಾಗೂ ಇತರೆ ಸ್ವಚ್ಛತಾ ಕಾರ್ಮಿಕರ ಹಕ್ಕುಗಳು ಮತ್ತು ಅವರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ಆಯೋಗವು ಸ್ಥಾಪಿತವಾಗಿದ್ದು, ತಮ್ಮ ಸ್ಥಿತಿಗತಿಗಳನ್ನು ಸುಧಾರಿಸಲು ಶ್ರಮಿಸಲಾಗುವುದು. ಈ ನಿಟ್ಟಿನಲ್ಲಿ ಇಂದು ನೇರ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪೌರ ಕಾರ್ಮಿಕರು ತಮ್ಮ ಕುಂದುಕೊರತೆಗಳನ್ನು ಮುಕ್ತವಾಗಿ ಹೇಳಬೇಕು. ಅವುಗಳನ್ನು ಪರಿಹರಿಸಲು ಸಫಾಯಿ ಕರ್ಮಚಾರಿಗಳ ಆಯೋಗವಿದೆ ಎಂದರು.
ಸಫಾಯಿ ಕರ್ಮಚಾರಿಗಳಿಗೆ ಇನ್ಸೂರೆನ್ಸ್ ಮಾಡಿಸಬೇಕು. ಆರೋಗ್ಯ ತಪಾಸಣೆಗಳನ್ನು ಹಮ್ಮಿಕೊಳ್ಳಬೇಕು. ಆರೋಗ್ಯ ಸುರಕ್ಷಾ ಪರಿಕರಗಳಾದ ಮಾಸ್ಕ್, ಕೈಗವಚ, ಶೂಗಳು, ಬಟ್ಟೆಗಳು, ಕೈತೊಳೆದುಕೊಳ್ಳಲು ಬೇಕಾಗುವ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಪೌರಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಸೌಲಭ್ಯಗಳನ್ನು ನೀಡಬೇಕು. ಅವರು ನಮ್ಮಂತೆ ಮನುಷ್ಯರಾಗಿರುವುದರಿಂದ ಎಲ್ಲರೂ ಅವರನ್ನು ಗೌರವದಿಂದ ಕಾಣುವಂತಾಗಬೇಕು ಎಂದು ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ಬಸ್ ನಿಲ್ದಾಣದಲ್ಲಿನ ಸ್ವಚ್ಛತಾ ಸಿಬ್ಬಂದಿಗಳು ಮಾತನಾಡಿ, ನಮಗೆ ಕನಿಷ್ಠವೇತನ ಸಿಗುತ್ತಿಲ್ಲ. ಉಪಹಾರ ಸರಿಯಾಗಿ ನೀಡುತ್ತಿಲ್ಲ ಹಾಗೂ ಸರಿಯಾದ ಸಮಯಕ್ಕೆ ಸಂಭಳ ಸಿಗುತ್ತಿಲ್ಲ. ಯಾವುದೇ ರೀತಿಯ ಸುರಕ್ಷತಾ ಪರಿಕರಗಳನ್ನು ಸಹ ನೀಡುತ್ತಿಲ್ಲವೆಂದು ಹೇಳಿದರು. ಕೊಪ್ಪಳ ನಗರಸಭೆಯ ಪೌರ ಕಾರ್ಮಿಕರು ಮಾತನಾಡಿ, ನಮಗೆ ನಗರಸಭೆಯಿಂದ ಅಗತ್ಯ ಸೌಲಭ್ಯಗಳು ಸಿಗುತ್ತಿವೆ. ಆದರೆ, ನಾವು ಕಳೆದ 26, 27 ವರ್ಷಗಳಿಗಿಂತಲೂ ಹೆಚ್ಚು ಕಾಲ ಕೆಲಸ ಮಾಡುತ್ತಿದ್ದೆವೆ. ನಮಗೆ ಖಾಯಂ ಉದ್ಯೋಗ ಕೊಡಬೇಕೆಂದು ಮನವಿ ಮಾಡಿದರು.
ಆಯೋಗದ ಅಧ್ಯಕ್ಷರು ಮಾತನಾಡಿ, ಬಸ್ ನಿಲ್ದಾಣದಲ್ಲಿನ ಸ್ವಚ್ಛತಾ ಸಿಬ್ಬಂದಿಗಳಿಗೆ ಕಾರ್ಮಿಕ ಇಲಾಖೆಯ ಮಾರ್ಗಸೂಚಿಯಂತೆ ಕನಿಷ್ಠ ವೇತನ ನೀಡಲು ಕೆ.ಕೆ.ಆರ್.ಟಿ.ಸಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಕಾರ್ಮಿಕ ಅಧಿಕಾರಿಗಳು ಪರಿಶೀಲನೆ ಕೈಗೊಂಡು ಸಂಬಂಧಿಸಿದ ಗುತ್ತಿಗೆದಾರರ ಮೇಲೆ ನಿಯಮಾನುಸಾರ ಕ್ರಮವಹಿಸಿ. 25 ವರ್ಷಕ್ಕಿಂತ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ ಪೌರಕಾರ್ಮಿಕರಿಗೆ ಸರ್ಕಾರದ ನಿಯಮದಂತೆ ಹಾಗೂ ಆದ್ಯತೆ ಮೆರೆಗೆ ಖಾಯಂಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಗಂಗಾವತಿಯ 14 ಮತ್ತು ಕಾರಟಗಿಯ 3 ಜನ ಸೇರಿ ಒಟ್ಟು 17 ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಮನೆ ಕಟ್ಟಿಕೊಳ್ಳಲು ಪ್ರೋತ್ಸಾಹಧನ ಮಂಜೂರಾತಿ ಆದೇಶ ಪತ್ರಗಳನ್ನು ಫಲಾನುಭವಿಗಳಿಗೆ ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಮಹದೇವಸ್ವಾಮಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಿ.ಮಂಜುನಾಥ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ಸಫಾಯಿ ಕರ್ಮಚಾರಿ ಜಿಲ್ಲಾಮಟ್ಟದ ಜಾಗೃತಿ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ರಗಡಪ್ಪ ಮತ್ತು ವಿವಿಧ ಇಲಾಖೆಗಳ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಪೌರಕಾರ್ಮಿಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article