ಸಿರಿವಾರ ಸೆ 09. ಬಳ್ಳಾರಿ ಅಂಚೆ ವಿಭಾಗದ ಬಳ್ಳಾರಿ ತಾಲೂಕಿನ ಸಿರಿವಾರ ಗ್ರಾಮದಲ್ಲಿ ನೂತನ ಶಾಖಾ ಅಂಚೆ ಕಚೇರಿಯನ್ನು ಇದೇ ಸೋಮವಾರ 08/09/2025 ರಂದು ವಿಜೃಂಭಣೆಯಿಂದ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮವನ್ನು ಪಿ. ಚಿದಾನಂದ, ಅಂಚೆ ಅಧೀಕ್ಷಕರು , ಬಳ್ಳಾರಿ ವಿಭಾಗ, ಹಾಗೂ ಶ್ರೀಮತಿ. ದೊಡ್ಡಬಸಮ್ಮ, ಅಧ್ಯಕ್ಷರು ಸಿರಿವಾರ ಗ್ರಾಮ ಪಂಚಾಯತಿ ಜಂಟಿಯಾಗಿ ಉದ್ಘಾಟಿಸಿದರು.
ಈ ಸಂದರ್ಭವನ್ನು ಉದ್ದೇಶಿಸಿ ಮಾತನಾಡಿದ ಪಿ. ಚಿದಾನಂದ, ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರು, ಸಿರಿವಾರ ಗ್ರಾಮದಲ್ಲಿ ಅಂಚೆ ಕಚೇರಿ ಸ್ಥಾಪನೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಗ್ರಾಮದ ಜನರಿಗೆ ಅಭಿನಂದನೆ ಸಲ್ಲಿಸಿದರು.
ಗ್ರಾಮದ ಜನರ ಬಹು ದಿನಗಳ ವಿನಂತಿಯನ್ನು ಮಾನ್ಯವಾಗಿ ಪರಿಗಣಿಸಿ, ಅವರ ಅಗತ್ಯತೆಗಳನ್ನು ಪೂರೈಸುವ ಉದ್ದೇಶದಿಂದ ಈ ಕಚೇರಿ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು. ಈ ಶಾಖಾ ಅಂಚೆ ಕಚೇರಿ ಮೂಲಕ ಹಿರಿಯ ನಾಗರೀಕರು , ವಯೋ ವೃದ್ದರು , ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುವವರು, ವಿಶೇಷ ಸಾಮರ್ಥ್ಯ ಹೊಂದಿದವರು ಸೇರಿದಂತೆ ಹಲವರು ಪ್ರಯೋಜನ ಪಡೆಯಲಿದ್ದಾರೆ. ಇನ್ನುಮುಂದೆ ಇವರು ಸೇವೆಗಾಗಿ ಕಪ್ಪಗಲ್ಲು ಗ್ರಾಮಕ್ಕೆ ಹೋಗುವ ಅವಶ್ಯಕತೆಯಿಲ್ಲದೆ, ತಮ್ಮ ಊರಿನಲ್ಲಿಯೇ ಎಲ್ಲಾ ಅಂಚೆ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ಉಳಿತಾಯ ಬ್ಯಾಂಕ್ ಖಾತೆಗಳು , ಮನಿ ಆರ್ಡರ್, ಸುಕನ್ಯಾ ಸಮೃದ್ಧಿ ಖಾತೆ, ಗ್ರಾಮೀಣ ಅಂಚೆ ವಿಮಾ ಸೌಲಭ್ಯಗಳು, ಪ್ರಧಾನ ಮಂತ್ರಿ ಸುರಕ್ಷಾ ಯೋಜನೆಗಳು, ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಇತರೆ ಅಂಚೆ ಇಲಾಖೆಯ ಎಲ್ಲಾ ಸೇವೆಗಳು ಇಲ್ಲಿ ಲಭ್ಯವಿರುತ್ತವೆ ಹಾಗೂ ಗ್ರಾಮಸ್ಥರು ಈ ಸೇವೆಗಳನ್ನು ಉತ್ತಮವಾಗಿ ಉಪಯೋಗಿಸಿಕೊಂಡು, ಅಂಚೆ ಕಚೇರಿ ಹಾಗೂ ಗ್ರಾಮದ ಪ್ರಗತಿಗೆ ಸಹಕರಿಸುವಂತೆ ಕೋರಲಾಯಿತು. ಈ ಸೇವಾ ಆರಂಭವು ಗ್ರಾಮೀಣ ಪ್ರದೇಶದಲ್ಲಿ ಸಂಪರ್ಕ ಮತ್ತು ಸಾರ್ವಜನಿಕ ಸೇವೆಗಳ ತಲುಪುವಿಕೆಯನ್ನು ಹೆಚ್ಚಿಸುವ ಉದ್ದೇಶದತ್ತ ಒಂದು ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ, ಶ್ರೀಮತಿ. ದೊಡ್ಡಬಸಮ್ಮ, ಅಧ್ಯಕ್ಷರು, ಸಿರಿವಾರ ಗ್ರಾಮ ಪಂಚಾಯತಿ ಇವರು ಮಾತನಾಡಿ, ಸಿರಿವಾರ ಗ್ರಾಮದಲ್ಲಿ ಶಾಖಾ ಅಂಚೆ ಕಛೇರಿಯು ಪ್ರಾರಂಭವಾಗಿದ್ದು ಅತೀವ ಸಂತೋಷ ತಂದಿದ್ದು, ಬಹು ದಿನಗಳ ಬೇಡಿಕೆಯನ್ನು ಈಡೇರಿಸಿ ಇಂದು ಅಂಚೆ ಕಚೇರಿ ಪ್ರಾರಂಬಿಸಿದ್ದಕ್ಕಾಗಿ ಅಂಚೆ ಇಲಾಖೆಗೆ ಧನ್ಯವಾದಗಳನ್ನು ಅರ್ಪಿಸಿದರು. ನೆರೆದಿದ್ದ ಗ್ರಾಮಸ್ತರನ್ನು ಉದ್ದೇಶಿಸಿ ಮಾತನಾಡಿ, ಅಂಚೆ ಇಲಾಖೆಯು ಒದಗಿಸುವ ಎಲ್ಲ ಸೇವೆಗಳನ್ನು ಬಳಸಿಕೊಂಡು, ಅಂಚೆ ಕಚೇರಿಯ ಸದುಪಯೋಗ ಪಡೆದುಕೊಳ್ಳಬೇಕಾಗಿ ಮನವಿ ಮಾಡಿದರು.
ವಿ.ಜೆ. ಬಾದಾಮಿ ಸಹಾಯಕ ಅಧೀಕ್ಷಕರು ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮಸ್ಥರ ಮನವಿಯಂತೆ ಇಂದು ಹೊಸ ಅಂಚೆ ಕಚೇರಿ ಪ್ರಾರಂಭಗೊಂಡಿದ್ದು, ಎಲ್ಲರೂ ಅಂಚೆ ಇಲಾಖೆಯ ಸೇವೆಗಳನ್ನು ಪಡೆಯಲು ಮನವಿ ಮಾಡಿದರು.
ಉದ್ಘಾಟನಾ ಸಮಾರಂಭದಲ್ಲಿ ಸಿರಿವಾರ ಗ್ರಾಮಪಂಚಾಯತಿಯ ರಮೇಶ್ ಉಪಾಧ್ಯಕ್ಷರು ಮತ್ತು ಸದಸ್ಯರುಗಳಾದ ಮರಿಲಿಂಗಪ್ಪ, ಆದೆಪ್ಪ, ತಳವಾರ ಸುಂಕಯ್ಯ, ಕೋಮಾರಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಉಪಸ್ಥಿತರಿದ್ದರು.
ಬಳ್ಳಾರಿ ಅಂಚೆ ವಿಭಾಗೀಯ ಹಾಗೂ ಉಪ ವಿಭಾಗೀಯ ಕಚೇರಿಗಳ ಹಾಗೂ ಇತರೆ ಕಚೇರಿಗಳ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಹಾಜರಿದ್ದರು.
ವಿಭಾಗೀಯ ಕಚೇರಿಯ ರವಿಕುಮಾರ್ ನಿರೂಪಿಸಿದರು.