ಹೈದರಾಬಾದ್29: ಭಾರತದಲ್ಲಿ ಅತಿ ಹೆಚ್ಚು ಕಾಂಡೋಮ್ಗಳನ್ನು ಬಳಸುವುದು ಮುಸ್ಲಿಮರು ಎಂದು ಎಐಎಂಐಎಂ ಸಂಸದ ಅಸಾದುದೀನ್ ಓವೈಸಿ ಹೇಳಿದ್ದಾರೆ.
ಹೈದರಾಬಾದ್ನಲ್ಲಿ ಸಾರ್ವಜನಿಕ ರಾಲಿಯಲ್ಲಿ ಭಾನುವಾರ ಮಾತನಾಡಿದ ಸಂಸದ ಓವೈಸಿ, ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಆಸ್ತಿ ಹಂಚುತ್ತಾರೆ ಎಂದು ಪರೋಕ್ಷವಾಗಿ ಮುಸ್ಲಿಂ ಸಮುದಾಯಕ್ಕೆ ಹಿಂದೂಗಳ ಆಸ್ತಿಯನ್ನು ಕಾಂಗ್ರೆಸ್ ಹಂಚುತ್ತದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಆರೋಪಕ್ಕೆ ಓವೈಸಿ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಡೋಮ್’ ಬಳಕೆ ಕುರಿತಾದ ತಮ್ಮ ಹಳೆೇಯ ಹೇಳಿಕೆಯನ್ನು ಪುನರುಚ್ಚರಿಸುವ ಮೂಲಕ ತಿರುಗೇಟು ನೀಡಿದ್ದಾರೆ. ದೇಶದಲ್ಲಿ ಮುಸ್ಲಿಮರು ಅತಿ ಹೆಚ್ಚು ಕಾಂಡೋಮ್ ಬಳಸುತ್ತಿದ್ದಾರೆ. ಹೀಗಂತ ಸರಕಾರದ ದತ್ತಾಂಶಗಳು ಹೇಳುತ್ತಿವೆ. ಆದರೂ ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರುತ್ತಾರೆ ಎಂಬ ಹೇಳಿಕೆ ಮೂಲಕ ಒಂದು ಸಮದಾಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದ್ವೇಷ ಭಾವನೆ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಮುಸ್ಲಿಮರಲ್ಲಿ ಫಲವತ್ತತೆ ಕಡಿಮೆಯಾಗುತ್ತಿದೆ ಎಂದು ಕೇಂದ್ರ ಸರಕಾರದ ದಾಖಲೆಗಳೇ ಹೇಳುತ್ತಿವೆ. ಮುಸ್ಲಿಮರು ಅತಿ ಹೆಚ್ಚು ಕಾಂಡೋಮ್ ಬಳಸುತ್ತಾರೆ. ಇದನ್ನು ಹೇಳಲು ನನಗೆ ಯಾವ ನಾಚಿಕೆಯೂ ಇಲ್ಲ. ಆದರೆ, ಮೋದಿ ಮಾತ್ರ ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರುತ್ತಾರೆ. ಹೀಗೆ ಬಿಟ್ಟರೆ ಅಲ್ಪಸಂಖ್ಯಾತರು ಭವಿಷ್ಯದಲ್ಲಿ ಬಹುಸಂಖ್ಯಾತರಾಗುತ್ತಾರೆ ಎಂಬ ದ್ವೇಷದ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ದೂರಿದರು.
ದೇಶವೊಂದರ ಪ್ರಧಾನಿ, ಈ ದೇಶದ ಜನಸಂಖ್ಯೆಯಲ್ಲಿ ಶೇ 15ರಷ್ಟು ನುಸುಳುಕೋರರಿದ್ದಾರೆ ಎಂದು ಹೇಳುತ್ತಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದು ಇಲ್ಲ ಎಂದು ಟೀಕಿಸಿದರು.
ಎಲ್ಲಾ ಕಡೆ ಮೋದಿ ಗ್ಯಾರಂಟಿ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಮಸ್ಲಿಮರು, ದಲಿತರ ಬಗೆಗಿನ ದ್ವೇಷವೇ ಮೋದಿ ಗ್ಯಾರಂಟಿ ಎಂದು ಟೀಕಿಸಿದ ಓವೈಸಿ, ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬ ಮೋದಿ ಮಾತು ಬರಿ ಬೋಗಸ್ ಎಂದು ಕಿಡಿಕಾರಿದರು.
ರಾಜಸ್ಥಾನದ ಬನ್ಸ್ವಾರಾದಲ್ಲಿ ಇತ್ತೀಚೆಗೆ ಚುನಾವಣಾ ಪ್ರಚಾರ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಸಂಪತ್ತಿನ ಮರು ಹಂಚಿಕೆ ಘೋಷಣೆಯ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಮುಸ್ಲಿಮರಿಗೆ ಮರು ಹಂಚಿಕೆ ಮಾಡುತ್ತದೆ ಎಂದು ಹೇಳಿದ್ದರು.