ದೆಹಲಿ ಜೂನ್ 08: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆನೇತೃತ್ವದಲ್ಲಿ ಇಂದು (ಶನಿವಾರ) ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದೆ. 2024 ರ ಲೋಕಸಭೆ ಚುನಾವಣೆಯ ನಂತರ ಪಕ್ಷದ ಮೊದಲ ಸಭೆಯಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಕಾಂಗ್ರೆಸ್ ನಾಯಕರು ಮತ್ತು ದೇಶಾದ್ಯಂತದ ಲಕ್ಷಾಂತರ ಕಾರ್ಯಕರ್ತರ ಅಚಲ ನಿರ್ಧಾರ ಮತ್ತು ಕಠಿಣ ಪರಿಶ್ರಮಕ್ಕಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸುವ ಮೂಲಕ ಖರ್ಗೆ ಸಭೆಯಲ್ಲಿ ತಮ್ಮ ಮಾತು ಆರಂಭಿಸಿದ್ದಾರೆ.
“ಸಾರ್ವಜನಿಕರು ನಮ್ಮ ಮೇಲೆ ನಂಬಿಕೆಯನ್ನು ವ್ಯಕ್ತಪಡಿಸುವ ಮೂಲಕ ಸರ್ವಾಧಿಕಾರಿ ಶಕ್ತಿಗಳು ಮತ್ತು ಸಂವಿಧಾನ ವಿರೋಧಿ ಶಕ್ತಿಗಳಿಗೆ ಬಲವಾದ ಪ್ರತ್ಯುತ್ತರವನ್ನು ನೀಡಿದ್ದಾರೆ. ಭಾರತದ ಮತದಾರರು ಬಿಜೆಪಿಯ 10 ವರ್ಷಗಳ ವಿಭಜನೆ, ದ್ವೇಷ ಮತ್ತು ಧ್ರುವೀಕರಣದ ರಾಜಕೀಯವನ್ನು ತಿರಸ್ಕರಿಸಿದ್ದಾರೆ. ಪ್ರತಿಕೂಲ ಸಂದರ್ಭಗಳಲ್ಲಿ ಚುನಾವಣೆಯಲ್ಲಿ ಹೋರಾಡಿ ಗೆದ್ದ ಲೋಕಸಭೆಗೆ ಹೊಸದಾಗಿ ಚುನಾಯಿತರಾದ ಕಾಂಗ್ರೆಸ್ ಸದಸ್ಯರಿಗೆ ಅಭಿನಂದನೆಗಳು ಎಂದು ಖರ್ಗೆ ಹೇಳಿದ್ದಾರೆ.
ಚುನಾವಣಾ ತಯಾರಿ ಮತ್ತು ಮೈತ್ರಿ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಖರ್ಗೆ, “ಸಂವಿಧಾನ, ಆರ್ಥಿಕ ಅಸಮಾನತೆ, ನಿರುದ್ಯೋಗ ಸಮಸ್ಯೆಗಳನ್ನು ಹೈಲೈಟ್ ಮಾಡಿ ಸಾಮಾಜಿಕ ನ್ಯಾಯ ಮತ್ತು ಸೌಹಾರ್ದತೆ ಬಗ್ಗೆ ಜನರಿಗೆ ಅರಿವು ಮೂಡಿಸಿದ್ದಕ್ಕಾಗಿ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿಯನ್ನು ಅಭಿನಂದಿಸಿದ್ದಾರೆ.