ಇಂಡಿ: ಮೇ 7 ರ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಯುವ ಮತದಾರರು “ನಮ್ಮ ನಡೆ ಮತಗಟ್ಟೆಯ ಕಡೆ” ಧ್ಯೆಯದೊಂದಿಗೆ ಉತ್ಸಾಹದಿಂದ ಮತ ಚಲಾಯಿಸಬೇಕೆಂದು
ಪಿಡಿಓ ಬಸವರಾಜ ಬಬಲಾದ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ಹಮ್ಮಿಕೊಂಡ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ”ನಮ್ಮ ನಡೆ ಮತಗಟ್ಟೆಯ ಕಡೆ”
ಅಭಿಯಾನದಲ್ಲಿ ಮತದಾನದ ಧ್ವಜಾರೋಹಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಮತದಾನದಲ್ಲಿ ಸರ್ವರೂ ಪಾಲ್ಗೊಳ್ಳಬೇಕೆಂಬುದು ಚುನಾವಣಾ ಆಯೋಗದ ಗುರಿ. ಪ್ರಜ್ಞಾವಂತ ಪ್ರಜೆಗಳೇ ರಾಷ್ಟ್ರದ ನಿರ್ಮಾತೃಗಳು. ಮತಗಟ್ಟೆಗಳ ಬಳಿ ಎಲ್ಲಾ ರೀತಿಯ ವ್ಯವಸ್ಥೆಗಳಿರಲಿದ್ದು, ಎಲ್ಲರೂ ಒಟ್ಟಾಗಿ ಇತರರನ್ನು ಪ್ರೇರೇಪಿಸಿ ತಪ್ಪದೇ ಮತ ಚಲಾಯಿಸಬೇಕೆಂದು ತಿಳಿಸಿದರು.
ಮತಗಟ್ಟೆ ಅಧಿಕಾರಿ ಸಂತೋಷ ಬಂಡೆ ಮಾತನಾಡಿ,
ಚುನಾವಣೆ ಪ್ರಜಾಪ್ರಭುತ್ವದ ಹಬ್ಬವಿದ್ದಂತೆ. ಎಲ್ಲ ಮತದಾರರು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಮತದಾನ ಮಾಡಿ, ಪ್ರಜಾಪ್ರಭುತ್ವದ ಯಶಸ್ಸಿಗೆ ಸಹಕರಿಸಬೇಕು. ದೇಶದ ಭವಿಷ್ಯ ಹಾಗೂ ಮುಂದಿನ ಜನಾಂಗದ ಅನುಕೂಲಕ್ಕಾಗಿ ಪ್ರತಿಯೊಬ್ಬರು ಮತದಾನದ ಹಕ್ಕನ್ನು ಚಲಾಯಿಸಬೇಕೆಂದು ಹೇಳಿದರು.
ಮತಗಟ್ಟೆ ಅಧಿಕಾರಿ ಶರಣಪ್ಪ ಚಾಳೇಕರ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಕ್ಕು ಮತ್ತು ಕರ್ತವ್ಯ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಪ್ರಜಾಪ್ರಭುತ್ವ ಬಲಪಡಿಸುವಲ್ಲಿ ಮತದಾರರು ನೀಡುವ ಒಂದೊಂದು ಮತಗಳು ಅವಶ್ಯವಾಗಿವೆ ಎಂದು ಹೇಳಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ, ಬಸ್ ನಿಲ್ದಾಣದಲ್ಲಿ ಮತದಾನದ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಮತದಾರರಿಗೆ ಮತಗಟ್ಟೆಯ ಮಾಹಿತಿ ನೀಡುವ ಜೊತೆಗೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಮತಗಟ್ಟೆ ಅಧಿಕಾರಿಗಳಾದ ಶಾಂತೇಶ ಹಳಗುಣಕಿ, ಎಸ್ ವ್ಹಿ ಬೇನೂರ, ದೀಪಾ ಕಟ್ಟಿಮನಿ, ರಾಜೇಶ್ವರಿ ದಳವಾಯಿ, ಗ್ರಾಮಸ್ತರಾದ ಸಂತೋಷ ಕೋಟಗೊಂಡ, ಮುಖ್ಯ ಶಿಕ್ಷಕ ಅನಿಲ ಪತಂಗಿ, ಶಿಕ್ಷಕರಾದ ಎಸ್ ಎಂ ಪಂಚಮುಖಿ, ಈರಣ್ಣ ಹುಣಸಗಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕರು ಭಾಗವಹಿಸಿದ್ದರು.