ವಿಜಯಪುರ: ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೂಲತಃ ಮಹಾರಾಷ್ಟ್ರದವರಾಗಿದ್ದು ಇವರ ತಂದೆ ರಾಮನಗೌಡರು ಬೀಡಿ ಮಾರುತ್ತಿದ್ದರು. ಇವರ ಮನೆತನದ ಹೆಸರು ಧರ್ಮಕಡ್ಲಿ ಎಂದು ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ್ ಅವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಯತ್ನಾಳ್’ಗೆ ರಾಜಕೀಯ ಜೀವನ ಕೊಟ್ಟಿದ್ದೇ ನಮ್ಮ ಮನೆತನ. ನಮ್ಮ ತಂದೆಯ ಕಾಲಿನ ಮಣ್ಣು ಸಹ ನೀವಾಗಲ್ಲ. ನಮ್ಮ ತಂದೆ ಬಗ್ಗೆ ಇನ್ನೊಂದು ಮಾತನಾಡಿದರೂ ಸುಮ್ಮನಿರಲ್ಲ. ತಾಕತ್ ಇದ್ದರೆ ಎದುರು-ಬದುರು ನಿಂತು ಮಾತನಾಡಲಿ ಎಂದು ಸವಾಲು ಹಾಕಿದರು.
ಯತ್ನಾಳರ ಅಜ್ಜನ ಹೆಸರು ಬಸನಗೌಡ. ಮೂಲತಃ ಮಹಾರಾಷ್ಟ್ರದ ಜತ್ತ ತಾಲೂಕಿನ ಕಾಗನೇರಿಯವರಾದ ಇವರ ಪುತ್ರ ರಾಮನಗೌಡ ಪಾನ್‌ಶಾಪ್ ಇರಿಸಿಕೊಂಡಿದ್ದರು. ಇವರ ಮನೆತನದ ಹೆಸರು ಧರ್ಮಕಡ್ಲಿ. ತಂದೆ ತೀರಿಕೊಂಡಾಗ ಹೊಡೆದಾಡಿ ಅವಮಾನಿಸಿ ಇವರು ಯಾವ ಸೀಮೆ ಪಾಟೀಲ? ಎಲ್ಲಿದೆ ಇವರ ಗೌಡಕಿ? ಗೌಡಕಿ ಪದದ ಅರ್ಥವಾದರೂ ಗೊತ್ತೆ? ಬನ್ನಿ ಗೌಡಕಿ ಎಂದರೆ ಹೇಗಿರುತ್ತದೆ ಎಂದು ನಾವು ತೋರಿಸುತ್ತೇವೆ.
ನಮ್ಮ ತಂದೆ ನಗರಸಭೆ ಅಧ್ಯಕ್ಷರಾಗಿ ಮಾಡಿದ ಕಾರ್ಯ ಇನ್ನೂ ಚಿರಸ್ಥಾಯಿಯಾಗಿದೆ. ನಾವೆಲ್ಲ ನಮ್ಮ ಅಪ್ಪಗೆ ಹುಟ್ಟಿದ್ದೇವೆ. ಅಂತೆಯೇ ನನ್ನಣ್ಣ ರಾಜೀನಾಮೆ ನೀಡಿ ಏನೆಂದು ಸಾಬೀತು ಪಡಿಸಿದ್ದಾನೆ. ಪಕ್ಷ ಬೇರೆಯಾದರೂ ಮನೆತನದ ವಿಚಾರಕ್ಕಾಗಿ ನಾನು ಈ ಮಾತು ಹೇಳಲೇಬೇಕಿದೆ. ನಮ್ಮ ಮನೆತನದ ಹೆಸರು ಹಚಡದ ಎಂದು ಹೇಳುವ ಯತ್ನಾಳ್ ತನ್ನ ಇತಿಹಾಸ ಅರಿಯಲಿ. ಅವರ ತಂದೆ ಬಗ್ಗೆ ನಾನು ಮಾತನಾಡಲ್ಲ. ಅವರ ಬಗ್ಗೆ ನಮಗೆ ಗೌರವವಿದೆ. ಈ ಯತ್ನಾಳರಂತೆ ರಾಮನಗೌಡರ ಹೆಸರಲ್ಲಿ ಡಬ್ಬಿ ಇಟ್ಟು ನಾವು ರೊಕ್ಕ ಎತ್ತಲ್ಲ, ದನದ ಹೆಸರಲ್ಲಿ ರೊಕ್ಕ ಎತ್ತಲ್ಲ, ಇಡೀ ರಾಜ್ಯದಲ್ಲಿಯೇ ನಮ್ಮ ಮನೆತನಕ್ಕೆ ಹೆಸರಿದೆ ಎಂದು ವಾಗ್ದಾಳಿ ನಡೆಸಿದರು.