ಹುನಗುಂದ; ನಗರದಲ್ಲಿ ಬೆಳೆದು ಬಂದ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಯುವ ಪೀಳಿಗೆಗೆ ಮನವರಿಕೆಯಾಗುವ ನಿಟ್ಟಿನಲ್ಲಿ ಕಳೆದ ೯ವರ್ಷಗಳಿಂದ ಸಮಾನ ಮನ:ಸ್ಥಿತಿಯ ತಂಡವು ಅಸ್ಥಿತ್ವಕ್ಕೆ ತಂದ ಹೊನ್ನಗುಂದ ಸಂಸ್ಕೃತಿ ಬಳಗ ಎಂಬ ಶಿರೋನಾಮೆಯ ಹೊಸಬ ಬಳಗವು ಈ ವರ್ಷವೂ ೨೦೨೬ರ ಜನೇವರಿ ೬ರಿಂದ ೧೦ರವರೆಗೆ ಬಳ್ಳಾರಿಯ ಧಾತ್ರೆ ಮತ್ತು ಕಾರ್ಕಳದ ರಂಗಾಯಣ ತಂಡಗಳಿಂದ ಪ್ರತಿ ದಿನ ಸಂಜೆ ೬-೩೬ಕ್ಕೆ ದಿನಕ್ಕೆ ಒಂದರಂತೆ ಒಟ್ಟು ೫ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಹೊಸಬ ತಂಡದ ಹಿರಿಯ ನಿರ್ದೇಶಕ ಬಡ್ಸ್ ಕಾರ್‍ಯದರ್ಶಿ ಮಹಾಂತೇಶ ಅಗಸಿಮುಂದಿನ ಹೇಳಿದರು.
ಇಲ್ಲಿನ ಬಡ್ಸ್ ಸಂಸ್ಥೆಯಲ್ಲಿ ಹೊಸಬ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತ ಕಲಿಯುಗ ಭರಾಟೆಯಲ್ಲಿ ಮರೆಯಾಗುತ್ತಿರುವ ರಂಗ ಚಟುವಟಿಕೆಗಳಿಗೆ ಪುನ:ಶ್ಚೇತನ ಮತ್ತು ಕಲೆಯನ್ನು ಉಳಿಸಿ ಬೆಳೆಸುವದು ಹೊಸಬದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಪ್ರತಿ ವರ್ಷ ಹಮ್ಮಿಕೊಳ್ಳುವ ಈ ಸಂಭ್ರಮದ ನಾಟಕೋತ್ಸವಕ್ಕೆ ಪ್ರಾಯೋಜಕರು ಮುಖ್ಯ ಪಾತ್ರವಹಿಸುವತ್ತಿದ್ದಾರೆ. ಉತ್ಸವಕ್ಕೆ ಬೇಕಾಗುವ ಆರ್ಥಿಕ ವೆಚ್ಚಕ್ಕೆ ನಗರದ ಕಲೆಯನ್ನು ಪ್ರೀತಿಸುವ ರಂಗಾಸಕ್ತರು ಪ್ರಾಯೋಜಕ ರೂಪದಲ್ಲಿ ಸಹಾಯ ಸಹಕಾರ ನೀಡುತ್ತಿದ್ದು, ಈ ಹಿನ್ನೆಲೆ ಪ್ರತಿವರ್ಷದ ನಾಟಕೋತ್ಸವ ಮತ್ತು ಇನ್ನಿತರ ಕಾರ್‍ಯಕ್ರಮಗಳು ತಪ್ಪದೆ ಯಶಸ್ವಿಯಾಗಿ ನಡೆಯುತ್ತಿವೆ ಎಂದರು.
ಹೊಸಬದ ನಿರ್ದೇಶಕ ಮತ್ತು ನಾಟಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸುವ ಡಾ. ಮಹಾಂತೇಶ ಕಡಪಟ್ಟಿ ಮಾತನಾಡಿ ನಗರದ ಚಿತ್ತರಗಿ ಸಂಸ್ಥಾನಮಠ ಹುನಗುಂದದ ಗುರುಮಹಾಂತ ಸ್ವಾಮಿಗಳು ಮತ್ತು ಗಚ್ಚಿನಮಠದ ಅಮರೇಶ್ವರ ದೇವರು ದಿವ್ಯ ಸಾನಿಧ್ಯವಹಿಸುವರು. ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ನಾಟಕೋತ್ಸವವನ್ನು ಉದ್ಘಾಟಿಸುವರು. ಪೊಲಿಸ್ ಉಪಾಧೀಕ್ಷಕ ಸಂತೋಷ ಬನ್ನಟ್ಟಿ, ವೃತ್ತ ನಿರೀಕ್ಷಕ ಶರಣಬಸ್ಪ ಆಜೂರ, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈಯಾಧಿಕಾರಿ ಡಾ. ಮಂಜುನಾಥ ಅಂಕೋಲ್ಕರ, ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಹೆಸ್ಕಾಂ ಶಾಖಾಧಿಕಾರಿ ದತ್ತು ದಾಯಿಗುಡಿ, ರಂಗಕರ್ಮಿ ತಾಲೂಕ ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ ಮತ್ತು ಹಿರಿಯ ಪತ್ರಕರ್ತ ವರ್ಷದ ಸಂಚಾಲಕ ವೀರೇಶ ಕುರ್ತಕೋಟಿ ಪಾಲ್ಗೊಳ್ಳಲಿದ್ದಾರೆ.
೫ನಾಟಕಗಳ ಪ್ರವೇಶ ಉಚಿತವಾಗಿದ್ದು ಜನೇವರಿ ೬ರಂದು ೬-೩೬ಕ್ಕೆ ಸಿರಿಗೇರೆ ಬಳ್ಳಾರಿಯ ಧಾತ್ರಿ ರಂಗಸಂಸ್ಥೆಯ ಸಂಸಾರದಲ್ಲಿ ಸ ನಿ ದ ಪ, ೭ರಂದು ಶಿವಶರಣ ಹರಳಯ್ಯ ಮತ್ತು ೮ರಂದು ಯಕ್ಷ ರಂಗಾಯಣ ಕಾರ್ಕಳದ ಗುಲಾಮನ ಸ್ವಾತಂತ್ರ್ಯ ಯಾತ್ರೆ, ೯ರಂದು ಸೋಮಿಯ ಸೌಭಾಗ್ಯ ಮತ್ತು ೧೦ರಂದು ಮಹಾತ್ಮರ ಬರವಿಗಾಗಿ ಹೀಗೆ ನಾಟಕಗಳು ಪ್ರದರ್ಶನಗೋಳ್ಳಲಿವೆ ಎಂದು ಡಾ. ಕಡಪಟ್ಟಿ ತಿಳಿಸಿದರು. ತಂಡದ ನಿರ್ದೇಶಕರಾದ ಶೋಕ ಬಾವವಿಕಟ್ಟಿ, ವಾದಿರಾಜ ಗುಡ್ಡದ, ಐ.ಎಚ್. ನಾಯಕ, ಶಿವಬಸವ ಅಂಗಡಿ ಮತ್ತು ಚನ್ನಕೇಶವ ಅವರಾದಿ ಇದ್ದರು.

