ಬೆಂಗಳೂರು, ಸೆಪ್ಟೆಂಬರ್ 16: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ನಡೆದ ಗಲಭೆಯಲ್ಲಿ ನಿಷೇಧಿತ ಸಂಘಟನೆಗಳ ಕೈವಾಡವಿರುವ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ. ಗಲಭೆ ವೇಳೆ ಪಾಕ್ ಪರ ಘೋಷಣೆ ಕೂಗಿದ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ನಾಗಮಂಗಲ ಗಲಭೆಯಲ್ಲಿ ಕೇರಳ ಮೂಲದವರ ಮತ್ತು ನಿಷೇಧಿತ ಪಿಎಫ್ಐ ಸಂಘಟನೆ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿರುವ ಬೆನ್ನಲ್ಲೇ ಅಶೋಕ್ ಈ ಹೇಳಿಕೆ ನೀಡಿದ್ದಾರೆ
‘‘ನಾಗಮಂಗಲ ಕೋಮುಗಲಭೆ ವೇಳೆ ಪಾಕ್ ಪರ ಘೋಷಣೆ? ನಾಗಮಂಗಲದಲ್ಲಿ ಬುಧವಾರ ರಾತ್ರಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆಯಲ್ಲಿ ಮೂವರು ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳು ಕೂಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳ ಹೇಳುತ್ತಿದ್ದು, ಈ ಕೋಮುದಳ್ಳುರಿಯಲ್ಲಿ ನಿಷೇಧಿತ ಸಂಘಟನೆಗಳ ಕೈವಾಡವಿರುವ ಅನುಮಾನ ಮತ್ತಷ್ಟು ಗಟ್ಟಿಯಾಗುತ್ತಿದೆ. ಇದರ ಬೆನ್ನಲ್ಲೇ ಚಿಕ್ಕಮಗಳೂರಲ್ಲಿ ಬೈಕ್ನಲ್ಲಿ ಪ್ಯಾಲೆಸ್ತೀನ್ ಧ್ವಜ ಹಿಡಿದಿರುವ ಪುಂಡಾಟ, ದಾವಣಗೆರೆಯ ಗಾಂಧಿನಗರ ಹಾಗೂ ಅಹ್ಮದ್ ನಗರಗಳಲ್ಲಿ ಹಿಂದೂ ಯುವಕರು ಬಾವುಟ ಕಟ್ಟಿದ್ದಕ್ಕೆ ಮತಾಂಧ ಪುಂಡರು ಅವರ ಮೇಲೆ ಹಲ್ಲೆ ಮಾಡಿರುವುದು, ಇವನ್ನೆಲ್ಲಾ ಗಮನಿಸುತ್ತಿದ್ದರೆ ಈ ಪ್ರಚೋದನಕಾರಿ ಘಟನೆಗಳು ಗಣೇಶೋತ್ಸವವನ್ನೇ ಟಾರ್ಗೆಟ್ ಮಾಡಿರುವಂತಿದೆ’’ ಎಂದು ಎಕ್ಸ್ ಸಂದೇಶದಲ್ಲಿ ಅಶೋಕ್ ಉಲ್ಲೇಖಿಸಿದ್ದಾರೆ.