ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ, ಭಾರತೀಯ ಸೇನೆಯು ಮಂಗಳವಾರ ತಡರಾತ್ರಿ ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಭಾರತದ ಈ ಪ್ರತೀಕಾರದ ಕ್ರಮಕ್ಕೆ ‘ಆಪರೇಷನ್ ಸಿಂಧೂರ್’ ಎಂದು ಹೆಸರಿಡಲಾಗಿದೆ.
ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಂಡಿರುವ ಭಾರತ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ 9 ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಕ್ಷಿಪಣಿ ದಾಳಿ ನಡೆಸಿದ ಭಾರತ ಉಗ್ರರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ. ಯಾವುದೇ ಸೂಚನೆ ಇಲ್ಲದೆ ಸುಮಾರು 20 ನಿಮಿಷಗಳ ಕಾಲ ನಡೆದ ಈ ದಾಳಿಯಿಂದ ಪಾಕ್ ಪತರುಗುಟ್ಟಿ ಹೋಗಿದೆ
ಸಿಂಧೂರ ಸಾಂಪ್ರದಾಯಿಕವಾಗಿ ಹಿಂದೂ ಮಹಿಳೆಯರ ಮುತ್ತೈದೆತನದ ಸಂಕೇತ. ಏಪ್ರಿಲ್ 22ರಂದು ಧರ್ಮದ ಆಧಾರದ ಮೇಲೆ ಪುರುಷರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದರು. ಅನೇಕ ಮಹಿಳೆಯರ ಮುತೈದೆತನಕ್ಕೆ ಕೈ ಹಾಕುವ ದುಸ್ಸಾಹಸ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತ ಡೆಡ್ಲಿ ಅಟ್ಯಾಕ್ ನಡೆಸಿದ್ದು, ಈ ಆಪರೇಷನ್‌ಗೆ ಈ ಹೆಸರು ಅತ್ಯಂತ ಸೂಕ್ತವಾಗಿದೆ.
ಇನ್ನು ಪ್ರಮುಖ ವಿಚಾರ ಎಂದರೆ ಯುದ್ಧಕ್ಕೆ ಹೊರಡುವ ಯೋಧರು ಹಣೆಗೆ ಸಿಂಧೂರ ತಿಲಕವನ್ನು ಇಡುವುದು ವಾಡಿಕೆ. ಹೀಗಾಗಿ ಈ ಆಪರೇಷನ್‌ಗೆ ಸಿಂಧೂರ ಎಂದು ಹೆಸರಿಡಲಾಗಿದೆ. ಇನ್ನು ಆಪರೇಷನ್ ಸಿಂಧೂರ್ ಎಂಬ ಹೆಸರಿನಲ್ಲಿ ಭಾವನಾತ್ಮಕ ಮತ್ತು ವೀರೋಚಿತ ಸಂದೇಶವಿದೆ.