ಬೆಂಗಳೂರು, ಸೆಪ್ಟೆಂಬರ್ 01: ರಾಜಕಾರಣಿಗಳು ಮತ್ತು ಅಧಿಕಾರಿಗಳಿಂದಲೇ ತುಂಬಿರುತ್ತಿದ್ದ ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದ ಒಳಗೆ ಜನಸಾಮಾನ್ಯರಿಗೂ ಇತ್ತೀಚೆಗೆ ಅವಕಾಶ ನೀಡಲಾಗಿತ್ತು. ಇದೀಗ ಅದೇ ರೀತಿಯಾಗಿ 19ನೇ ಶತಮಾನದ ಐತಿಹಾಸಿಕ ಕಟ್ಟಡ ರಾಜಭವನ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳ್ಳುತ್ತಿರುವುದಾಗಿ ವರದಿ ಆಗಿದೆ. ಆ ಮೂಲಕ ಜನರು ರಾಜಭವನವನ್ನು ಒಳಗಿನಿಂದ ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ.
ಸ್ವಾತಂತ್ರ್ಯಪೂರ್ವದಲ್ಲಿ ನಿರ್ಮಿಸಲಾಗಿರುವ ರಾಜಭವನವು ತನ್ನ ಅಪೂರ್ವ ವಾಸ್ತುಶಿಲ್ಪ, ಶ್ವೇತ ವರ್ಣದಿಂದ ಎಲ್ಲರ ಗಮನ ಸೆಳೆಯುತ್ತಿದೆ. ರಾಜ್ಯಪಾಲರು ನಿವಾಸಿಸುವ ರಾಜಭವನವನ್ನು ನೋಡಬೇಕು ಎನ್ನುವುದು ಸಾಕಷ್ಟು ಜನರ ಆಸೆ. ಸದ್ಯ ಜನರ ಆ ಆಸೆ ನೆರವೇರುವ ಕಾಲ ಸನ್ನಿಹಿತವಾಗಿದೆ. ಮೊಟ್ಟಮೊದಲ ಬಾರಿಗೆ ಗೈಡ್ ಟೂರ್ ಹೆಸರಿನಲ್ಲಿ ಸಾರ್ವಜನಿಕರಿಗೆ ಮುಕ್ತವಾಗಲಿದೆ.