ಮಂಗಳೂರು, ಜುಲೈ 3: ಕರ್ನಾಟಕದ ಎಲ್ಲಾ ಟ್ರೆಕ್ಕಿಂಗ್ ತಾಣಗಳಿಗೂ ಜುಲೈ ಮೂರನೇ ವಾರದಿಂದ ಆನ್ಲೈನ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಪರಿಚಯಿಸಲಾಗುವುದು ಎಂದು ಕರ್ನಾಟಕ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಟ್ರೆಕ್ಕಿಂಗ್ ಪ್ರಕ್ರಿಯೆಯನ್ನು ನಿಯಂತ್ರಿಸುವ ಸಲುವಾಗಿ ಈ ಕ್ರಮ ಮೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಅರಣ್ಯ ಇಲಾಖೆಯ ಮಂಗಳೂರು ವೃತ್ತದ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ವ್ಯಾಪ್ತಿಯ ಕುದುರೆಮುಖ, ನೇತ್ರಾವತಿ ಮತ್ತು ಇತರ ಟ್ರೆಕ್ಕಿಂಗ್ ತಾಣಗಳಿಗೆ ಇಲಾಖೆಯು ಈಗಾಗಲೇ ಆನ್ಲೈನ್ ಬುಕಿಂಗ್ ಪರಿಚಯಿಸಿದೆ. ಜುಲೈ ತಿಂಗಳ ಕೊನೆಯಲ್ಲಿ ಇದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದಿದ್ದಾರೆ.
ಒಂದೇ ವೆಬ್ಸೈಟ್ನಲ್ಲಿ ಎಲ್ಲಾ ಟ್ರೆಕ್ಕಿಂಗ್ ತಾಣಗಳಿಗೆ ಆನ್ಲೈನ್ ಬುಕಿಂಗ್ ಮಾಡಲು ಅವಕಾಶ ಕಲ್ಪಿಸುವ ಸಾಫ್ಟ್ವೇರ್ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಹದಿನೈದು ದಿನಗಳಲ್ಲಿ ಸಿದ್ಧವಾಗಲಿದೆ ಎಂದು ಸಚಿವರು ಹೇಳಿದ್ದಾರೆ. ಈ ಪ್ರಕ್ರಿಯೆಯನ್ನು ಸರಳೀಕರಿಸುವ ಮೂಲಕ ಬುಕ್ಕಿಂಗ್ ವ್ಯವಸ್ಥೆಯಲ್ಲಿನ ಅಕ್ರಮಗಳಿಗೆ ಕೊನೆ ಹಾಡುವ ಗುರಿಯನ್ನು ಹೊಸ ವ್ಯವಸ್ಥೆ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಈ ವರ್ಷ 5 ಕೋಟಿ ಸಸಿಗಳನ್ನು ನೆಡುವ ಗುರಿಯನ್ನು ಅರಣ್ಯ ಇಲಾಖೆ ಹೊಂದಿದ್ದು, ಈಗಾಗಲೇ ಕೆಲಸ ಆರಂಭವಾಗಿದೆ ಎಂದು ಖಂಡ್ರೆ ಹೇಳಿದ್ದಾರೆ. ಕಳೆದ ವರ್ಷ ಕೂಡ 5 ಕೋಟಿ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ, 5.43 ಕೋಟಿ ಸಸಿ ನೆಡಲಾಗಿತ್ತು. ಇದಕ್ಕಾಗಿ 100 ಕೋಟಿ ಹೆಚ್ಚುವರಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಖಂಡ್ರೆ ಮಾಹಿತಿ ನೀಡಿದ್ದಾರೆ.