ಮುಂಬೈ04: ಕೇಂದ್ರ ಸರ್ಕಾರ ಶನಿವಾರ ಈರುಳ್ಳಿ ರಫ್ತಿನ ಮೇಲಿದ್ದ ನಿಷೇಧವನ್ನು ಹಿಂತೆಗೆದುಕೊಂಡ ಬೆನ್ನಲ್ಲೇ ಅತ್ತ ಮಹಾರಾಷ್ಟ್ರದ ಮಾರುಕಟ್ಟೆಯಲ್ಲಿ ಈರುಳ್ಳಿ ದರದಲ್ಲಿ ಏರಿಕೆ ಕಂಡುಬಂದಿದೆ.
ಹೌದು.. ಈ ಹಿಂದೆ ಉತ್ಪಾದನೆ ಕಡಿತ, ಅಭಾವ ಮತ್ತು ದರ ಏರಿಕೆ ಕಾರಣಗಳಿಂದಾಗಿ ಕೇಂದ್ರ ಸರ್ಕಾರ ಈರುಳ್ಳಿ ರಫ್ತಿನ ಮೇಲೆ ನಿಷೇಧ ಹೇರಿತ್ತು. ಇದೀಗ ಶನಿವಾರ ಈ ನಿಷೇಧವನ್ನು ತೆರವುಗೊಳಿಸಿದ ಬೆನ್ನಲ್ಲೇ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಲಾಸಲ್ಗಾಂವ್ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಪ್ರತಿ ಕ್ವಿಂಟಲ್ಗೆ ಸರಾಸರಿ 200 ರೂ. ಏರಿಕೆ ಕಂಡಿದೆ.
ಲಾಸಲ್ಗಾಂವ್ನಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಭಾರತದ ಅತಿದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆ ಎಂದು ಹೇಳಲಾಗುತ್ತದೆ.
ಇಂದು ಬೆಳಗ್ಗೆಯಷ್ಟೇ ಕೇಂದ್ರ ಸರ್ಕಾರ ಈರುಳ್ಳಿ ರಫ್ತಿನ ಮೇಲಿದ್ದ ನಿರ್ಬಂಧ ತೆರವು ಮಾಡಿ, ಈರುಳ್ಳಿ ಮೇಲಿನ ಕನಿಷ್ಠ ರಫ್ತು ಬೆಲೆಯನ್ನು 550 US ಡಾಲರ್ ಗೆ ನಿಗದಿಪಡಿಸಿತ್ತು. ಅಲ್ಲದೆ ಈರುಳ್ಳಿ ರಫ್ತಿನ ಮೇಲೆ ಕೇಂದ್ರ ಸರ್ಕಾರ ಶೇ.40ರಷ್ಟು ಸುಂಕ ವಿಧಿಸಿದೆ. ಈ ಕ್ರಮದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಸ್ವಲ್ಪ ಏರಿಕೆಯಾಗಿದ್ದು, ಸರಾಸರಿ ಬೆಲೆ ಕ್ವಿಂಟಾಲ್ಗೆ 200 ರೂ.ಗಳಷ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಪಿಎಂಸಿ ಅಧ್ಯಕ್ಷ ಬಾಳಾಸಾಹೇಬ ಕ್ಷೀರಸಾಗರ, ‘ಈರುಳ್ಳು ರಫ್ತಿನ ಮೇಲಿನ ನಿರ್ಬಂಧ ತೆರವು ನಿರ್ಧಾರದಿಂದ ರೈತರಿಗೆ ಲಾಭವಾಗಲಿದೆ. ಇಂದು ಶನಿವಾರವಾದ್ದರಿಂದ ಸೋಮವಾರ ಮಾರುಕಟ್ಟೆ ಪುನರಾರಂಭಗೊಂಡಾಗ ನಿಜವಾದ ಪರಿಣಾಮ ತಿಳಿಯಲಿದೆ. ಸರ್ಕಾರದ ನಿರ್ಧಾರದಿಂದಾಗಿ ಈರುಳ್ಳಿ ದರ ಏರಿಕೆಯಾಗಲಿದ್ದು, ಗುಣಮಟ್ಟದ ಆಧಾರದ ಮೇಲೆ ಕ್ವಿಂಟಾಲ್ಗೆ 801 ರೂ., 2,551 ಮತ್ತು 2,100 ರೂ.ಗೆ ಮಾರಾಟವಾಗಹುದು ಎಂದು ಹೇಳಿದರು.
ಇನ್ನು ಈರುಳ್ಳಿ ರಫ್ತಿನ ಮೇಲೆ ಕೇಂದ್ರ ಸರ್ಕಾರ ಹೇರಿರುವ ಶೇ.40ರಷ್ಟು ಸುಂಕ ರೈತರ ಲಾಭವನ್ನು ತಿಂದು ಹಾಕುತ್ತದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ರೈತರೊಬ್ಬರು, ‘ರಫ್ತು ನಿಷೇಧವನ್ನು ಹಿಂತೆಗೆದುಕೊಳ್ಳುವುದು ಉತ್ತಮ ನಿರ್ಧಾರ, ಆದರೆ ಇದು ಕನಿಷ್ಠ ಒಂದು ವರ್ಷದವರೆಗೆ ಜಾರಿಯಲ್ಲಿರಬೇಕು. ರಫ್ತು ಸುಂಕವು ಈರುಳ್ಳಿ ಬೆಳೆಗಾರರ ಲಾಭವನ್ನು ತಿನ್ನುತ್ತದೆ. ಇಷ್ಟು ದಿನ ನಿಷೇಧದಿಂದ ನಾವು ಅನುಭವಿಸಿದ ನಷ್ಟವನ್ನು ಯಾರು ಭರಿಸುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.