ಈರುಳ್ಳಿ ಬೆಲೆ ದಿಢೀರ್ ಇಳಿಕೆ; ಕ್ವಿಂಟಾಲ್​ಗೆ 2000 ರೂ.ಗೆ ಕುಸಿತ; ರೈತರು ಕಂಗಾಲು

Ravi Talawar
ಈರುಳ್ಳಿ ಬೆಲೆ ದಿಢೀರ್ ಇಳಿಕೆ; ಕ್ವಿಂಟಾಲ್​ಗೆ 2000 ರೂ.ಗೆ ಕುಸಿತ; ರೈತರು ಕಂಗಾಲು
WhatsApp Group Join Now
Telegram Group Join Now

ಬೆಂಗಳೂರು, ಅಕ್ಟೋಬರ್ 30: ರೈತ ಬೆವರು ಸುರಿಸಿ ದುಡಿದ ಈರುಳ್ಳಿ ಬೆಳೆ ಏಕಾಏಕಿ ಸುರಿದ ಮಳೆಯಿಂದ ಸಂಪೂರ್ಣ ಹಾಳಾಗಿದೆ. ಈ ವರ್ಷ ಆರಂಭದಲ್ಲಿ ಮಳೆಯ ಸಮಸ್ಯೆ ಏನೂ ಆಗಿರಲಿಲ್ಲ. ಫಸಲು ಚೆನ್ನಾಗಿಯೇ ಬಂದಿತ್ತು. ಹೀಗಾಗಿ ಇನ್ನೇನು ನೆಮ್ಮದಿಯಾಗಿರಬಹುದು ಎಂದುಕೊಂಡಿದ್ದ ರೈತನೆದೆಗೆ ಬರಸಿಡಿಲಿನಂತೆ ಅಪ್ಪಳಿಸಿದ್ದು ಇದೇ ಮಳೆ. ಏಕಾಏಕಿ ಬಿಟ್ಟೂ ಬಿಡದಂತೆ ಸುರಿದ ಮಳೆ ರಾಜ್ಯಾದ್ಯಂತ ಆತಂಕವನ್ನೇ ಸೃಷ್ಟಿಸಿತ್ತು. ಇದರ ಪರಿಣಾಮದಿಂದ ಚಿತ್ರದುರ್ಗ, ಬಾಗಲಕೋಟೆ, ಗದಗ, ಬೆಳಗಾವಿ, ಧಾರವಾಡ ಜಿಲ್ಲೆಗಳ ಸಾವಿರಾರು ಹೆಕ್ಟೇರ್​ ಪ್ರದೇಶಗಳಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ಸರ್ವನಾಶವಾಗಿದೆ.

ಕೋಟೆನಾಡು ಚಿತ್ರದುರ್ಗದಲ್ಲಿ ಮಳೆಗೆ ಕೆರೆ ಕಟ್ಟೆಗಳು ತುಂಬಿ ಹರಿದು, ಜಿಲ್ಲೆಯ ಹಲವು ಕಡೆಗಳಲ್ಲಿ ಜಮೀನುಗಳು ಸಂಪೂರ್ಣ ಜಲಾವೃತಗೊಂಡಿದ್ದವು. ಇದರಿಂದಾಗಿ ಅಪಾರ ಪ್ರಮಾಣದ ಈರುಳ್ಳಿ ಬೆಳೆ ಸರ್ವನಾಶವಾಗಿತ್ತು. ಸಚಿವ ಕೃಷ್ಣ ಬೈರೇಗೌಡ ಬೆಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಈರುಳ್ಳಿ ಬೆಳೆ ಬೆಳೆಯಲು ಎಕರೆಗೆ 80 ಸಾವಿರದಿಂದ 1 ಲಕ್ಷ ರೂಪಾಯಿವರೆಗೆ ಖರ್ಚಾಗುತ್ತದೆ. ಸಾಲಶೂಲ ಮಾಡಿ ಈರುಳ್ಳಿ ಬೆಳೆದು ಈಗ ಲಕ್ಷ ಲಕ್ಷ ನಷ್ಟ ಅನುಭವಿಸುವಂತಾಗಿದೆ ಎಂದು ರೈತ ಶ್ರೀಧರ್ ರೆಡ್ಡಿ ಅಳಲು ತೋಡಿಕೊಂಡಿದ್ದಾರೆ.

ಗದಗ ಜಿಲ್ಲೆಯಲ್ಲಿ ಈ ಬಾರಿ 14 ಸಾವಿರಕ್ಕೂ ಅಧಿಕ ಪ್ರದೇಶಗಳಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿತ್ತು. ಆದರೆ ವರುಣನ ಆರ್ಭಟಕ್ಕೆ ಸುಮಾರು 4 ಸಾವಿರ ಹೆಕ್ಟೇರ್ ಪ್ರದೇಶದ ಈರುಳ್ಳಿ ಬೆಳೆ ಸಂಪೂರ್ಣ ಸರ್ವನಾಶವಾಗಿದೆ. ಒಂದೆಡೆ, ಬೆಳೆ ಹಾನಿಯಾದರೆ ಮತ್ತೊಂದೆಡೆ ದಿಢೀರ್​ ಬೆಲೆ ಕುಸಿತ ರೈತರನ್ನು ಜರ್ಜರಿತರನ್ನಾಗಿಸಿದೆ.

WhatsApp Group Join Now
Telegram Group Join Now
Share This Article