ಬೆಂಗಳೂರು, ಜುಲೈ.22: ಮುಂಗಾರು ಅಧಿವೇಶನಲ್ಲಿ ಕಲಾಪ ನಡೆಸಿದ ವೈಖರಿ ಚ್ಯುತಿ ತರುವಂತಿದೆ. ವಿಪಕ್ಷಗಳಿಗೆ ಚರ್ಚೆಗೆ ಸಮಯ ನೀಡುತ್ತಿಲ್ಲ. ಸ್ಪೀಕರ್ ಏಕಪಕ್ಷಿಯವಾಗಿದ್ದಾರೆ ಎಂದು ಆರೋಪಿ ಕೆಲ ಶಾಸಕರು ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಪತ್ರ ಬರೆದು ಅಸಮಾಧಾನ ಹೊರ ಹಾಕಿದ್ದಾರೆ. ಕಲಾಪದ ಮೇಲೆ ವಿರೋಧ ಪಕ್ಷಗಳಿಗೆ ಚರ್ಚೆ ಮಾಡಲು ಬಿಡದೆ ಸ್ವ ಪಕ್ಷ ಕಾಂಗ್ರೆಸ್ಗೆ ಹೆಚ್ಚಿನ ಆಧ್ಯತೆ ನೀಡಿದ್ದಾರೆ. ವಿಪಕ್ಷಗಳಿಗೆ ಅವಕಾಶವನ್ನೇ ನೀಡದಿರುವುದು ಪ್ರಜಾತ೦ತ್ರ ವ್ಯವಸ್ಥೆ ಅಪಾಯಕ್ಕೆ ಜಾರುತ್ತಿದೆಯೇನೋ ಎ೦ಬ ಅನುಮಾನ ಬರುವುದಕ್ಕೆ ಕಾರಣವಾಗಿದೆ ಎಂದು ಶಾಸಕರು ಪತ್ರ ಬರೆದು ಯುಟಿ ಖಾದರ್ ನಡೆಗೆ ಕಿಡಿಕಾರಿದ್ದಾರೆ.
ಸಂಸದೀಯ ವ್ಯವಹಾರ ಹಾಗೂ ಗುಣಮಟ್ಟದ ಕಲಾಪ ನಿರ್ವಹಣೆಯ ಕಾರಣಕ್ಕಾಗಿ ಕರ್ನಾಟಕ ವಿಧಾನಸಭೆ ಇಡೀ ದೇಶಕ್ಕೆ ಮಾದರಿಯಾಗಿದೆ. ಅತಿ ಹೆಚ್ಚು ಬಾರಿ ಗೆದ್ದ ಶಾಸಕರ ಪೈಕಿ ಒಬ್ಬರಾಗಿರುವ ನಿಮಗೆ ಇದು ತಿಳಿಯದ ಸ೦ಗತಿಯೇನು ಅಲ್ಲ. ಶ್ರೀ ವೈಕುಂಠ ಬಾಳಿಗರಿ೦ದ ಮೊದಲ್ಕೊಂಡು ಇಲ್ಲಿವರೆಗೆ ಸಭಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ ಪ್ರತಿಯೊಬ್ಬ ಸ್ಪೀಕರ್ ತಮ್ಮದೇ ಆದ ಶೈಲಿಯಲ್ಲಿ ಕರ್ತವ್ಯ ನಿರ್ವಹಿಸಿದರೂ ಅವರ ಉದ್ದೇಶ ಮಾತ್ರ ಗುಣಮಟ್ಟದ ಕಲಾಪದ ಜೊತೆಗೆ ಶಾಸನ ಸಭೆ ಜನಹಿತದ ಚರ್ಚೆಗೆ ಧ್ವನಿಯಾಗಬೇಕು ಎ೦ಬುದೇ ಆಗಿತ್ತು. ಕಾಂಗ್ರೆಸ್ ಪಕ್ಷದವರೇ ಆಗಿದ್ದರೂ ಸ್ಪೀಕರ್ ಸ್ಥಾನದಲ್ಲಿ ಕುಳಿತ ಹಿರಿಯರಾದ ಕಾಗೋಡು ತಿಮ್ಮಪ್ಪ, ರಮೇಶ್ ಕುಮಾರ್ ಈ ವಿಚಾರದಲ್ಲಿ ಇಡಿ ದೇಶಕ್ಕೆ ಮಾದರಿಯಾಗಿ ಸಭಾಧ್ಯಕ್ಷ ಸ್ಥಾನದ ಘನತೆಯನ್ನು ಎತ್ತಿ ಹಿಡಿದಿದ್ದರು.