ಬೆಳಗಾವಿ,03: ಒಂದು ರಾಷ್ಟ್ರ, ಒಂದು ಚುನಾವಣೆ ಪರಿಕಲ್ಪನೆಯನ್ನು ತರುವ ಬಿಜೆಪಿಯ ಯೋಜನೆಗಳನ್ನು ಪಿತೂರಿ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಒಂದು ರಾಷ್ಟ್ರ, ಒಂದು ಚುನಾವಣೆ ನಿಯಮ ಜಾರಿಗೆ ತಂದರೆ ತಮ್ಮ ಪಕ್ಷವು ಗರಿಷ್ಠ ಮತಗಳನ್ನು ಪಡೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ನಂಬಿದ್ದಾರೆ. ಹೀಗಾಗಿ ನಿಯಮ ಜಾರಿಗೆ ತರಲು ಯತ್ನಿಸುತ್ತಿದ್ದಾರೆ.
ಒಂದು ರಾಷ್ಟ್ರ ಒಂದು ಚುನಾವಣಾ ಸಿದ್ಧಾಂತದ ಪ್ರಕಾರ, ಲೋಕಸಭೆ, ರಾಜ್ಯ ವಿಧಾನಸಭೆಗಳು, ಪಂಚಾಯತ್‌ಗಳು, ಸ್ಥಳೀಯ ಸಂಸ್ಥೆಗಳು ಇತ್ಯಾದಿಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಯೋಜನೆ ಇದೆ ಎಂದು ಮೊಯ್ಲಿ ಹೇಳಿದರು.
ಲೋಕಸಭೆಗೆ ನಡೆಯುತ್ತಿರುವ ಚುನಾವಣೆಯನ್ನು ಪೂರ್ಣಗೊಳಿಸಲು ಕನಿಷ್ಠ 60 ದಿನಗಳು ಬೇಕಾಗುತ್ತವೆ, ಇನ್ನೂ ಬಿಜೆಪಿಯ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆಯಂತೆ ಚುನಾವಣೆ ನಡೆದರೆ ಅದು ಪೂರ್ಣಗೊಳ್ಳಲು ಹಲವಾರು ವರ್ಷಗಳು ಬೇಕಾಗಬಹುದು ಎಂದು ಮೊಯ್ಲಿ ಲೇವಡಿ ಮಾಡಿದ್ದಾರೆ.
ಬಿಜೆಪಿಯು ದೇಶದ ಮೇಲೆ ತನ್ನ ಹಿಡಿತವನ್ನು ಸ್ಥಾಪಿಸಲು ಈ ಪರಿಕಲ್ಪನೆಯನ್ನು ಯೋಜಿಸುತ್ತಿದೆ ಎಂದು ಅವರು ಆರೋಪಿಸಿದರು. ಲೋಕಸಭಾ ಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳುತ್ತಿದೆ ಆದರೆ ವಾಸ್ತವದಲ್ಲಿ 150 ರಿಂದ 200 ಸ್ಥಾನಗಳಿಗೆ ತೃಪ್ತಿಪಡಬೇಕಾಗುತ್ತದೆ. ಮೋದಿಯವರ 10 ವರ್ಷಗಳ ಆಡಳಿತ ಕೊನೆಗೊಳ್ಳಲಿದೆ ಎಂದರು.