ಬಳ್ಳಾರಿ08.. ನಗರದ ದೇವಿನಗರ ನಿವಾಸಿ ವೆಂಕಟೇಶ್ (ತಂದೆ: ಕಟ್ಟೇಗೌಡ), ವಯಸ್ಸು 50, ಚೀಟಿ ವ್ಯವಹಾರ ನಡೆಸುತ್ತಿದ್ದು ಸಾರ್ವಜನಿಕರಿಂದ ಭಾರೀ ಪ್ರಮಾಣದ ಹಣ ವಂಚನೆ ಮಾಡಿ ಪರಾರಿಯಾಗಿರುವ ಘಟನೆ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ.
ವೆಂಕಟೇಶ್ ಕಳೆದ ಕೆಲ ವರ್ಷಗಳಿಂದ ಚೀಟಿ ವ್ಯವಹಾರ ನಡೆಸುತ್ತಾ, ಹೆಚ್ಚಿನ ಲಾಭದ ಭರವಸೆ ನೀಡಿ ಸಾರ್ವಜನಿಕರನ್ನು ಸೆಳೆದಿದ್ದಾನೆ ಎನ್ನಲಾಗಿದೆ. ಸುಮಾರು 800ಕ್ಕೂ ಹೆಚ್ಚು ಜನರು ಚೀಟಿಯಲ್ಲಿ ಹಣ ಹೂಡಿಕೆ ಮಾಡಿದ್ದು, ಒಟ್ಟಾರೆ ನೂರು ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಇತ್ತೀಚೆಗೆ ಚೀಟಿ ಹಣ ವಾಪಸ್ ನೀಡದೇ ವೆಂಕಟೇಶ್ ಕಾಣೆಯಾಗಿದ್ದು, ಇದರಿಂದ ಆತ ವಂಚನೆ ಮಾಡಿ ಪರಾರಿಯಾಗಿದ್ದಾನೆ ಎಂಬ ಅನುಮಾನ ಬಲವಾಗಿದೆ. ವಂಚನೆಗೆ ಒಳಗಾದ ಪೀಡಿತರು ಇಂದು ಗುಂಪು ಸೇರಿ ಬಳ್ಳಾರಿ ಎಸ್‌ಪಿ ಬ್ರೂಸ್‌ಪೇಟ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಸಾರ್ವಜನಿಕರ ಗೋಳು
ಚೀಟಿಗೆ ಹಾಕಿದ ಹಣವೇ ನಮ್ಮ ಜೀವನದ ಆಧಾರವಾಗಿತ್ತು. ಮಕ್ಕಳ ಶಿಕ್ಷಣ, ಮದುವೆ, ಮನೆ ಕಟ್ಟುವ ಕನಸು ಎಲ್ಲವೂ ನಾಶವಾಯಿತು ಎಂದು ಪೀಡಿತರು ಅಳಲು ತೋಡಿಕೊಂಡಿದ್ದಾರೆ. ಆರೋಪಿಯನ್ನು ತಕ್ಷಣ ಬಂಧಿಸಿ ಹಣ ವಾಪಸ್ ಕೊಡಿಸಬೇಕು ಎಂದು ಅವರು ಪೊಲೀಸರನ್ನು ಒತ್ತಾಯಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ವೆಂಕಟೇಶ್ ಬಂಧನಕ್ಕೆ ಜಾಲ ಬೀಸಿದ್ದಾರೆ. ಈ ಘಟನೆ ನಗರದಲ್ಲಿ ಆತಂಕ ಮೂಡಿಸಿದೆ.


