ಬೆಂಗಳೂರು, ಜುಲೈ 16: ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನದ ಎರಡನೇ ದಿನವಾದ ಇಂದೂ ಸಹ ವಿಧಾನಸಭೆ ಕಲಾಪದಲ್ಲಿ ವಾಲ್ಮೀಕಿ ನಿಗಮದ ಹಗರಣ ತೀವ್ರವಾಗಿ ಸದ್ದು ಮಾಡಿತು.
ಮೊದಲೇ ಸಿದ್ಧವಾಗಿ ಬಂದಿದ್ದ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಮುಗಿ ಬೀಳಲು ಮುಂದಾದರು. ಆದರೆ ಮುಖ್ಯಮಂತ್ರಿಗಳು ಕಲಾಪದಲ್ಲಿ ಇರಲಿಲ್ಲ. ಈ ಕಾರಣಕ್ಕೆ ಬಿಜೆಪಿ ನಾಯಕರು ಮತ್ತಷ್ಟು ಸಿಡಿದೆದ್ದರು. ಮುಖ್ಯಮಂತ್ರಿಗಳ ವಿರುದ್ಧವೇ ಆರೋಪ ಕೇಳಿ ಬಂದಿದೆ. ಆರ್ಥಿಕ ಇಲಾಖೆ ಮೇಲೆ ನೇರ ಆರೋಪ ಇದೆ. ಮುಖ್ಯಮಂತ್ರಿಗಳನ್ನು ಕರೆಸಿ ಎಂದು ಬಿಜೆಪಿ ನಾಯಕರು ಪಟ್ಟು ಹಿಡಿದರು. ಇಲ್ಲದಿದ್ದರೆ ಕಲಾಪವನ್ನ ಮುಂದೂಡಿ ಎಂದು ಶಾಸಕ ಅಶ್ವತ್ಥ್ ನಾರಾಯಣ್ ಏರು ಧ್ವನಿಯಲ್ಲೇ ಆಗ್ರಹಿಸಿದರು.
ಅಶ್ವತ್ಥ್ ನಾರಾಯಣ್ ಆಗ್ರಹದಿಂದ ಕೆರಳಿದ ಡಿಸಿಎಂ ಡಿಕೆ ಶಿವಕುಮಾರ್, ‘ನೀನು ಮಾಡಬಾರದ್ದನ್ನು ಮಾಡಿರುವುದಕ್ಕೇ ನಾವು ಈಗ ಇಲ್ಲಿ ಕುಳಿತಿರುವುದು’ ಎಂದು ಗುಡುಗಿದರು. ಲೂಟಿ ಮಾಡುವುದರಲ್ಲಿ ಅಶ್ವತ್ಥ್ ನಾರಾಯಣ್ ಪಿತಾಮಹ ಅಂತ ಡಿಕೆ ಹೇಳಿದರು. ಈ ವೇಳೆ ಸದನದಲ್ಲಿ ಗದ್ದಲ ಉಂಟಾಯಿತು.
ಇಷ್ಟಕ್ಕೆ ಸುಮ್ಮನಾಗದ ಅಶ್ವತ್ಥ್ ನಾರಾಯಣ್, ನನ್ನ ಹೆಸರು ಹೇಳಿ ಆರೋಪ ಮಾಡಿದ್ದಾರೆ. ನಾನೇನು ಮಾಡಬಾರದ್ದನ್ನು ಮಾಡಿದ್ದೇನೆ ಹೇಳಿ ಎಂದು ಪಟ್ಟು ಹಿಡಿದರು. ಈ ವೇಳೆ ಡಿಕೆ ಶಿವಕುಮಾರ್ ಮತ್ತು ಅಶ್ವತ್ಥ್ ನಾರಾಯಣ್ ಮಧ್ಯೆ ಮಾತಿನ ಚಕಮಕಿ ನಡೆಯಿತು.