ಕಾರವಾರ: ಉತ್ತರಕನ್ನಡ ಜಿಲ್ಲೆಯ ಕರಾವಳಿ ತಾಲೂಕಿನಲ್ಲಿ ಮಳೆ ವ್ಯಾಪಕವಾಗಿ ಮುಂದುವರೆದಿದೆ. ವರುಣನ ಅಬ್ಬರದಿಂದ ಹಲವೆಡೆ ಹಾನಿ ಸಂಭವಿಸುತ್ತಿದ್ದು, ಕಾರವಾರ ತಾಲೂಕಿನ ಇಡೂರಿನ ಮನೆಗಳಿಗೆ ನೀರು ನುಗ್ಗಿ ಗ್ರಾಮವೇ ಮುಳುಗಡೆಯಾಗುವಂತಾಗಿದೆ.
ಭಾರಿ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಕಾರವಾರ ತಾಲೂಕಿನಲ್ಲಿಯೂ ಧಾರಾಕಾರ ಮಳೆಯಿಂದ ಚೆಂಡಿಯಾ ಬಳಿ ಇರುವ ಗುಡ್ಡದ ಪಕ್ಕದ ಇಡೂರು ಗ್ರಾಮಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಈ ನೀರು ಸಮುದ್ರಕ್ಕೆ ಸೇರಲು ಇರುವ ಮಾರ್ಗದಲ್ಲಿಯೇ ನೌಕಾನೆಲೆಯ ಕಾಂಪೌಂಡ್ ಇದೆ. ಹೀಗಾಗಿ, ಮಳೆ ನೀರು ಮುಂದೆ ಹೋಗದೇ ಸಮಸ್ಯೆ ಉಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದ ಸುಮಾರು 25 ಮನೆಗಳು ಜಲಾವೃತವಾಗಿದೆ. ಪ್ರತಿ ವರ್ಷ ಇದೇ ರೀತಿ ಸಮಸ್ಯೆಯಾಗುತ್ತಿದ್ದು, ಕ್ರಮ ಕೈಗೊಳ್ಳಲು ಮಾತ್ರ ಯಾರೂ ಮುಂದಾಗುತ್ತಿಲ್ಲ. ಅಧಿಕಾರಿಗಳು ಪ್ರತಿ ಮಳೆಗಾಲದಲ್ಲೂ ನೆಪಮಾತ್ರಕ್ಕೆ ಸ್ಥಳಕ್ಕೆ ಬಂದು ತೆರಳುತ್ತಿದ್ದಾರೆ. ನಮಗೆ ಶಾಶ್ವತ ಪರಿಹಾರ ಕಲ್ಪಿಸದ ಕಾರಣ ಯಾವಾಗಲೂ ಸಮಸ್ಯೆಯಲ್ಲೇ ದಿನ ಕಳೆಯಬೇಕಾದ ಸ್ಥಿತಿ ಇದೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.