ಕೊಪ್ಪಳ: ಇಡೀ ದೇಶದ ಗಮನ ಸೆಳೆದಿದ್ದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರುಕುಂಬಿ ಗ್ರಾಮದಲ್ಲಿ ದಲಿತರ ಗುಡಿಸಲುಗಳಿಗೆ ಅನ್ಯ ಸಮುದಾಯದವರು ಬೆಂಕಿ ಹಚ್ಚಿದ ಘಟನೆಯಲ್ಲಿ ಆರೋಪಿಗಳಾಗಿರುವ 101 ಮಂದಿಗೆ ಶಿಕ್ಷೆ ನೀಡಲು ನ್ಯಾಯಾಲಯ ಸಜ್ಜಾಗಿದ್ದು ಗುರುವಾರ ಶಿಕ್ಷೆ ಪ್ರಕಟವಾಗಲಿದೆ.
ಈ ಘಟನೆ 2014ರಲ್ಲಿ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಗ್ರಾಮದ ಹೋಟೆಲ್ಗಳು ಮತ್ತು ಕ್ಷೌರಿಕ ಅಂಗಡಿಗಳಲ್ಲಿ ದಲಿತರಿಗೆ ಪ್ರವೇಶ ನಿರಾಕರಿಸಿದ್ದಕ್ಕೆ ಸಂತ್ರಸ್ತರು ಮತ್ತು ಆರೋಪಿಗಳ ನಡುವೆ ಘರ್ಷಣೆ ನಡೆದಿತ್ತು. ಹಲವು ದಲಿತ ಮುಖಂಡರು ಕೊಪ್ಪಳ ಜಿಲ್ಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿದ್ದರು.
ಈ ಪ್ರಕರಣದಲ್ಲಿ ಆರಂಭದಲ್ಲಿ 117 ಮಂದಿ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಅವರಲ್ಲಿ ಕೆಲವರು ಸಾವನ್ನಪ್ಪಿದ್ದರೆ, 100 ಆರೋಪಿಗಳನ್ನು ಬಂಧಿಸಲಾಗಿದೆ. ಓರ್ವ ಆರೋಪಿ ಇನ್ನೂ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. 101 ಮಂದಿಗೆ ಏಕಕಾಲದಲ್ಲಿ ಶಿಕ್ಷೆ ವಿಧಿಸುತ್ತಿರುವುದು ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲು.