ಮೇ ೨೪ ರಂದು “ಪತ್ರಕರ್ತರ ಹಬ್ಬ”   

Hasiru Kranti
ಮೇ ೨೪ ರಂದು “ಪತ್ರಕರ್ತರ ಹಬ್ಬ”   
WhatsApp Group Join Now
Telegram Group Join Now

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ೩ನೇ ರಾಜ್ಯ ಸಮ್ಮೇಳನ

ಬಂಗ್ಲೆ ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿಪತ್ರಕರ್ತರ ಹಬ್ಬ

ಬೆಂಗಳೂರಿನಲ್ಲಿ ಮೇ ೨೪ ರಂದು ಭವ್ಯ ಕಾರ್ಯಕ್ರಮ

ಚನ್ನಮ್ಮನ ಕಿತ್ತೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ೩ನೇ ರಾಜ್ಯ ಸಮ್ಮೇಳನ, “ಪತ್ರಕರ್ತರ ಹಬ್ಬ” ಎಂಬ ಶೀರ್ಷಿಕೆ ಅಡಿಯಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ಮೇ ೨೪ ರ ಶನಿವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಸಾಧಕರಿಗೆ ಪ್ರಶಸ್ತಿ ಪ್ರದಾನ, ವಿಚಾರ ಸಂಕಿರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಚನ್ನಮ್ಮನ ಕಿತ್ತೂರು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಚಿನಗುಡಿ ಅವರು ಸೋಮವಾರ ಪಟ್ಟಣದ ಡೊಂಬರಕೊಪ್ಪ ಐಬಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಅವರು ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡರು. ಈ ಸಮ್ಮೇಳನವು ರಾಜ್ಯದ  ಪತ್ರಕರ್ತರಿಗೆ ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸಲಿದ್ದು, ವಿಚಾರ ಸಂಕಿರ್ಣದ ಮೂಲಕ ಪತ್ರಿಕೋದ್ಯಮದ ಸಮಕಾಲೀನ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು

ಕಾರ್ಯಕ್ರಮದ ಉದ್ಘಾಟನೆಯನ್ನು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಅವರು ನೆರವೇರಿಸಲಿದ್ದಾರೆ. ಇದೇ ವೇಳೆ, ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಹರ್ಷಿ ಡಾ. ಆನಂದ ಗುರೂಜಿ (ಸಂಸ್ಥಾಪಕರು, ಬ್ರಹ್ಮರ್ಷಿ ಆನಂದ ಸಿದ್ದಿ ಪೀಠ, ಸಾದಳ್ಳಿ), ಪರಮ ಪೂಜ್ಯ ಷಡಕ್ಷರಿ ಶಿವಯೋಗಿ ಡಾ. ಮುರುಘ ರಾಜೇಂದ್ರ ಮಹಾಸ್ವಾಮಿ (ಪೀಠಾಧಿಪತಿಗಳು, ಜಿಡಗಾ ಮಠ), ಮತ್ತು ಪರಮ ಪೂಜ್ಯ ಹವಾ ಮಲ್ಲಿನಾಥ್ ಮಹಾರಾಜ (ಅಧ್ಯಕ್ಷರು, ಭಾರತ ಮಾತಾ ಸೇವಾ ಸಮಿತಿ, ನಿರ್ಗುಡಿ) ಅವರು ವಹಿಸಲಿದ್ದಾರೆ. ಈ ಆಧ್ಯಾತ್ಮಿಕ ನಾಯಕರ ಉಪಸ್ಥಿತಿಯು ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಲಿದೆ.

ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳು: ಸಮ್ಮೇಳನದಲ್ಲಿ ಚಲನಚಿತ್ರ ನಟರು, ರಾಜಕೀಯ ಮುಖಂಡರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸಂಗೀತ ಕಾರ್ಯಕ್ರಮ, ನೃತ್ಯ ಪ್ರದರ್ಶನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರೋಪ ಸಮಾರಂಭಕ್ಕೆ ವರ್ಣರಂಜಿತ ಆಯಾಮವನ್ನು ಒದಗಿಸಲಿವೆ. ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗುವುದು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘವು ರಾಜ್ಯದ ಪತ್ರಕರ್ತರ ಹಕ್ಕುಗಳನ್ನು ಕಾಪಾಡುವುದರ ಜೊತೆಗೆ, ಅವರ ಕಾರ್ಯವೈಖರಿಯನ್ನು ಗುರುತಿಸಿ ಗೌರವಿಸುವ ಗುರಿಯನ್ನು ಹೊಂದಿದೆ. ಈ ಸಮ್ಮೇಳನವು ಪತ್ರಕರ್ತರಿಗೆ ತಮ್ಮ ವೃತ್ತಿಪರ ಜವಾಬ್ದಾರಿಗಳನ್ನು ಚರ್ಚಿಸಲು, ಹೊಸ ಒಳನೋಟಗಳನ್ನು ಪಡೆಯಲು ಮತ್ತು ಪರಸ್ಪರ ಸಂಪರ್ಕವನ್ನು ಬಲಪಡಿಸಲು ಒಂದೊಳ್ಳೆ ವೇದಿಕೆಯಾಗಲಿದೆ ಎಂದರು.

ಆಹ್ವಾನ : ತಾಲೂಕು ಅಧ್ಯಕ್ಷ ಬಸವರಾಜ ಚಿನಗುಡಿ ಅವರು, ರಾಜ್ಯದಾದ್ಯಂತದ ಪತ್ರಕರ್ತರನ್ನು ಈ ಭವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಿದ್ದಾರೆ. “ಈ ಸಮ್ಮೇಳನವು ಪತ್ರಿಕೋದ್ಯಮ ಕ್ಷೇತ್ರದ ಒಗ್ಗಟ್ಟನ್ನು ಬಲಪಡಿಸುವುದರ ಜೊತೆಗೆ, ಸಾಧಕರಿಗೆ ಸೂಕ್ತ ಗೌರವವನ್ನು ಸೂಚಿಸಲಿದೆ,” ಎಂದು ಅವರು ಹೇಳಿದರು. ಈ ಕಾರ್ಯಕ್ರಮವು ಕರ್ನಾಟಕದ ಪತ್ರಿಕೋದ್ಯಮ ಕ್ಷೇತ್ರದ ಒಂದು ಮೈಲಿಗಲ್ಲಾಗಲಿದೆ ಎಂಬ ನಿರೀಕ್ಷೆಯಿದ್ದು, ರಾಜ್ಯದಾದ್ಯಂತದ ಪತ್ರಕರ್ತರು ಮತ್ತು ಸಾಹಿತ್ಯಾಸಕ್ತರು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

WhatsApp Group Join Now
Telegram Group Join Now
Share This Article