ಅಥಣಿ : ವಿದ್ಯಾರ್ಥಿಗಳಲ್ಲಿ ಕುತೂಹಲವನ್ನು ಹುಟ್ಟುಹಾಕುವ, ಕಲಿಕೆಯನ್ನು ಉತ್ತೇಜಿಸುವ ಮತ್ತು ವೈಜ್ಞಾನಿಕ ಚಿಂತನೆಯನ್ನು ಉತ್ತೇಜಿಸುವ ಪ್ರಮುಖ ಉದ್ದೇಶದಿಂದ ಅಥಣಿ ತಾಲೂಕಿನ ವಿವಿಧ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜೆ ಎ ಪಿ ಯು ಕಾಲೇಜಿನಲ್ಲಿ ಡಿ. 28 ಮತ್ತು 29 ರಂದು ವಿಜ್ಞಾನ ವಸ್ತು ಪ್ರದರ್ಶನ, ಕಲಾ ಉತ್ಸವ ಮತ್ತು ಆಹಾರ ಮೇಳ ಆಯೋಜಿಸಲಾಗಿದೆ. ತಾಲೂಕಿನ ವಿವಿಧ ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರಸ್ತುತಪಡಿಸಬೇಕೆಂದು ಜಾಧವಜಿ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಡಾ ರಾಮ ಬಿ. ಕುಲಕರ್ಣಿ ಹೇಳಿದರು.
ಅವರು ಶನಿವಾರ ಇಲ್ಲಿನ ಜೆ ಎ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಜೆಎಪಿಯು ಕಾಲೇಜು ಅಥಣಿ ತಾಲೂಕಿನಲ್ಲಿ ಅಷ್ಟೇ ಅಲ್ಲ ಬೆಳಗಾವಿ ಜಿಲ್ಲೆಯಲ್ಲಿ ಶತಮಾನ ಪೂರೈಸಿದ ಸಂಸ್ಥೆಯಾಗಿದ್ದು, ರಾಜ್ಯದಲ್ಲಿ ತನ್ನದೇ ಚಾಫು ಮೂಡಿಸಿದೆ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕಾಗಿದೆ. ಇಂತಹ ನಮ್ಮ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಸ್ತು ಪ್ರದರ್ಶನ, ಕಲಾ ಉತ್ಸವ ಮತ್ತು ಆಹಾರ ಮೇಳ ಆಯೋಜಿಸಲಾಗಿದ್ದು ಅಥಣಿ ತಾಲೂಕಿನ ಪ್ರೌಢಶಾಲೆ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಮಹಾವಿದ್ಯಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ, ನ್ಯಾಯವಾದಿ ಸಂದೀಪ ಸಂಗೋರಾಮ ಮಾತನಾಡಿ ನಮ್ಮ ಜೆ ಎ ಪದವಿಪೂರ್ವ ಮಹಾವಿದ್ಯಾಲಯ ಅಥಣಿ ತಾಲೂಕಿನಲ್ಲಿ ಶತಮಾನಗಳಿಂದ ಅನೇಕ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಸ್ನೇಹಿ ವಾತಾವರಣದೊಂದಿಗೆ ಅತ್ಯುತ್ತಮ ಶಿಕ್ಷಣ ನೀಡುತ್ತಾ ಬಂದಿದೆ. ಈಗ ನೂತನವಾಗಿ ವಿಜ್ಞಾನ ವಿಭಾಗದಲ್ಲಿ ಕಂಪ್ಯೂಟರ್ ಸೈನ್ಸ್ ವಾಣಿಜ್ಯ ವಿಭಾಗದಲ್ಲಿ ಸ್ಟಾಟಿಸ್ಟಿಕ್ಸ್ ಕಂಪ್ಯೂಟರ್ ಸೈನ್ಸ್ ವಿಭಾಗ ಅಥಣಿ ತಾಲೂಕಿನಲ್ಲಿ ನಮ್ಮ ಮಹಾವಿದ್ಯಾಲಯದಲ್ಲಿ ಮಾತ್ರ ಲಭ್ಯವಿದ್ದು ಅತ್ಯುತ್ತಮ ಶಿಕ್ಷಣ ನೀಡುತ್ತಿದ್ದೇವೆ. ವಿಶೇಷವಾಗಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ಹಾಕುವ ಉದ್ದೇಶದಿಂದ ವಿಜ್ಞಾನ ವಸ್ತು ಪ್ರದರ್ಶನ, ಕಲಾ ಉತ್ಸವ ಮತ್ತು ಆಹಾರ ಮೇಳ ಈ ಪ್ರದರ್ಶನ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ವಿದ್ಯಾರ್ಥಿಗಳಿಗೆ ಹೊಸತನ, ಪ್ರಯೋಗ, ಮತ್ತು ನೈಜ-ಪ್ರಪಂಚದ ಸನ್ನಿವೇಶಗಳಲ್ಲಿ ವೈಜ್ಞಾನಿಕ ತತ್ವಗಳ ಅನ್ವಯವನ್ನು ಪ್ರೋತ್ಸಾಹಿಸುವ ವಿದ್ಯಾರ್ಥಿಗಳಲ್ಲಿ ಇರುವ ವೈಜ್ಞಾನಿಕ ಮನೋಭಾವವನ್ನು ಹೊರ ತರುವ ಹಾಗೂ ವಿವಿಧ ಕಲೆಯನ್ನು ಪ್ರೋತ್ಸಾಹಿಸುವ ವೇದಿಕೆಯಾಗಿದೆ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಎಂ. ಪಿ ಮೇತ್ರಿ ಮಾತನಾಡಿ ವಿಜ್ಞಾನ ವಸ್ತು ಪ್ರದರ್ಶನ, ಕಲಾ ಉತ್ಸವ ಮತ್ತು ಆಹಾರ ಮೇಳ ಉದ್ಘಾಟನಾ ಸಮಾರಂಭ ದಿ. 28 ರಂದು ಮುಂಜಾನೆ 9-00 ಗಂಟೆಗೆ ಜರುಗಲಿದ್ದು ಉದ್ಘಾಟಕರಾಗಿ ಕೊಪ್ಪಳದ ಕಿರ್ಲೋಸ್ಕರ್ ಪೆರೆಸ್ ಕೈಗಾರಿಕೆಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರನಾಥ ಗುಮಾಸ್ತೆ ಆಗಮಿಸಲಿದ್ದಾರೆ. ಜಾಧವಜಿ ಶಿಕ್ಷಣ ಸಂಸ್ಥೆಯ ಕಾರ್ಯಧ್ಯಕ್ಷ ಡಾ. ರಾಮ ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಿಕ್ಕೋಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ ಐ ಬಂಡಾರೆ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಜ್ಞಾನ ಶಿಕ್ಷಕ ಸಿ ಎಂ ಡೊಂಗರೆ, ಅತಿಥಿಗಳಾಗಿ ನಮ್ಮ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸರ್ವ ಸದಸ್ಯರು ಆಗಮಿಸಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅನೀಲ ವಿ. ದೇಶಪಾಂಡೆ, ಎಮ್. ವಿ. ಜೋಶಿ, ಡಾ. ವಿಶ್ವನಾಥ ಕುಲಕರ್ಣಿ, ಬಿ ಎಸ್ ಲೋಕುರ, ಎಸ್ ವಿ ದಾಸರಡ್ಡಿ,ಎಸ್ ಆರ್ ಪಾಟೀಲ ಡಾ. ಪಿ ಎಂ ಹುಲಗಬಾಳಿ, ಎಸ್ ಎಸ್ ಬಕಾಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.