ಸಹಕಾರಿ ಕ್ಷೇತ್ರದಲ್ಲಿ ಸುದೀರ್ಘ ಸೇವೆಗೆ ಗೌರವ ಸನ್ಮಾನ
ಹುಕ್ಕೇರಿ : ಬೆಳಗಾವಿ ಡಿಸಿಸಿ ಬ್ಯಾಂಕ್ಗೆ ಸತತವಾಗಿ ನಾಲ್ಕು ದಶಕಕ್ಕೂ ಹೆಚ್ಚು ಕಾಲ ನಿರ್ದೇಶಕರಾಗಿ ಆಯ್ಕೆಯಾದ ರಮೇಶ ಕತ್ತಿ ಅವರ ಸನ್ಮಾನ ಸಮಾರಂಭವನ್ನು ಪಟ್ಟಣದಲ್ಲಿ ಇದೇ ತಿಂಗಳು ಡಿ.೨೫ ರಂದು ಆಯೋಜಿಸಲಾಗಿದೆ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಹಾಗೂ ನಿರ್ದೆಶಕ ಸತ್ಯಪ್ಪಾ ನಾಯಿಕ ಹೇಳಿದರು.
ಪಟ್ಟಣದ ಪಿಎಲ್ಡಿ ಬ್ಯಾಂಕ್ನ ಸಭಾಗೃಹದಲ್ಲಿ ಸೋಮವಾರ ಸುದ್ಧಿಗೋಷ್ಠಿಯಲ್ಲಿ ಈ ವಿ?ಯ ತಿಳಿಸಿದ ಅವರು, ಸಹಕಾರಿ ಕ್ಷೇತ್ರದಲ್ಲಿ ಸುದೀರ್ಘ ಅವಧಿಯವರೆಗೆ ರಮೇಶ ಕತ್ತಿ ಅವರು ಸೇವೆ ಸಲ್ಲಿಸುತ್ತಿರುವ ಹಿನ್ನಲೆಯಲ್ಲಿ ಅವರ ಈ ಸತ್ಕಾರ ಸಮಾರಂಭವನ್ನು ಆಯೋಜಿಸಲಾಗಿದೆ ಎಂದರು.
ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ವತಿಯಿಂದ ಡಿ.೨೫ ರಂದು ಬೆಳಗ್ಗೆ ೧೦.೩೦ಕ್ಕೆ ಪಟ್ಟಣದ ವಿಶ್ವರಾಜ ಭವನದಲ್ಲಿ ನಡೆಯಲಿರುವ ಈ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಚಿವ ಎ.ಬಿ.ಪಾಟೀಲ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ನಿಖಿಲ್ ಕತ್ತಿ, ವಿದ್ಯುತ್ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಸಂಕೇಶ್ವರ ಟಿಎಪಿಸಿಎಂಎಸ್ ಅಧ್ಯಕ್ಷ ಮಹಾದೇವ ಜಿನರಾಳಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದುರದುಂಡಿ ಪಾಟೀಲ ಆಗಮಿಸುವರು. ಇದೇ ವೇಳೆ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಆಡಳಿತ ಮಂಡಳಿಯವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಅವರು ಹೇಳಿದರು.
ಕೆಲವರು ಸಹಕಾರಿ ರಂಗದಲ್ಲಿ ರಾಜಕಾರಣ ಬೆರೆಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸಹಕಾರವೇ ಬೇರೆ ರಾಜಕಾರಣವೇ ಬೇರೆಯಾಗಿದೆ. ಸಹಕಾರಿ ಕ್ಷೇತ್ರದಲ್ಲಿ ರಮೇಶ ಕತ್ತಿ ಅವರು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದು ಅವರನ್ನು ಪಕ್ಷಾತೀತವಾಗಿ ಸನ್ಮಾನಿಸಲಾಗುತ್ತಿದೆ. ಈ ಸನ್ಮಾನ ಸಮಾರಂಭದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದೆ ಎಂದರು.
ಮುಖಂಡರಾದ ಎ.ಕೆ.ಪಾಟೀಲ, ರಾಚಯ್ಯ ಹಿರೇಮಠ, ಗುರು ಕುಲಕರ್ಣಿ, ರಾಜು ಮುನ್ನೋಳಿ, ಶ್ರೀಶೈಲ ಮಠಪತಿ, ಬಾಹುಬಲಿ ನಾಗನೂರಿ, ಲಾಜಮ್ ನಾಯಿಕವಾಡಿ, ಅಶೋಕ ಹಿರೇಕೋಡಿ, ಬಸವರಾಜ ಗಂಗಣ್ಣವರ, ರಾಜು ಬಿರಾದಾರಪಾಟೀಲ, ಕೆಂಪಣ್ಣಾ ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು.


