ಬಳ್ಳಾರಿ ಜೈಲಿನ ಸಂದರ್ಶಕರ ಕೊಠಡಿಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದರ್ಶನ್ ವಿಚಾರಣೆ

Ravi Talawar
ಬಳ್ಳಾರಿ  ಜೈಲಿನ ಸಂದರ್ಶಕರ ಕೊಠಡಿಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದರ್ಶನ್ ವಿಚಾರಣೆ
WhatsApp Group Join Now
Telegram Group Join Now

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರೇಣುಕಾಸ್ವಾಮಿ ಕೊಲೆ ನಡೆದ ನಂತರ ಆರೋಪಿಗಳ ಮಧ್ಯೆ ಹಣದ ವ್ಯವಹಾರ ನಡೆದಿದೆ ಎನ್ನಲಾಗುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ. ಸಂದರ್ಶಕರ ಕೊಠಡಿಯಲ್ಲಿ ಅವರ ವಿಚಾರಣೆ ನಡೆಸುತ್ತಿದ್ದಾರೆ.

ಇಂದು ಮತ್ತು ನಾಳೆ ದರ್ಶನ್ ಅವರನ್ನು ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ತೀವ್ರ ವಿಚಾರಣೆ ನಡೆಸಲಿದ್ದಾರೆ. ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದರ್ಶನ್​ ರ ವಿಚಾರಣೆ ಮಾಡುತ್ತಿದ್ದಾರೆ. ಐಟಿ ಅಧಿಕಾರಿಗಳಿಗೆ ಸಹಕಾರ ನೀಡುವಂತೆ ನ್ಯಾಯಾಲಯದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಇ-ಮೇಲ್ ರವಾನೆಯಾಗಿತ್ತು.

ಕೊಲೆ ನಂತರ ಸರೆಂಡರ್ ಆಗಿದ್ದ ಮೂವರು: ರೇಣುಕಾಸ್ವಾಮಿ ಹತ್ಯೆ ನಂತರ ನಟ ದರ್ಶನ್ ಬಳಿಯಿಂದ ಹಣ ಪಡೆದು ಮೂವರು ತಾವೇ ಬಂದು ಪೊಲೀಸರ ಮುಂದೆ ಶರಣಾಗಿದ್ದರು. ಅಂದರೆ ಇಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಆರೋಪವನ್ನು ಇನ್ನೊಬ್ಬರ ಮೇಲೆ ಹೊರಿಸಲು ಪ್ಲ್ಯಾನ್ ಮಾಡಿದ್ದರು. ಕೊಲೆ ಕೇಸ್‌ ಮುಚ್ಚಿ ಹಾಕಲು 85 ಲಕ್ಷ ರೂಪಾಯಿ ಕ್ಯಾಶ್‌ ಬಂದಿದ್ದು ಎಲ್ಲಿಂದ ಎಂಬ ಬಗ್ಗೆ ಮಾಹಿತಿ ಕೋರಿ ನೋಟಿಸ್‌ ಜಾರಿ ಮಾಡಿತ್ತು. ಅಷ್ಟು ದೊಡ್ಡ ಮೊತ್ತದ ಕ್ಯಾಶ್ ಎಲ್ಲಿಂದ ಬಂತು? ಹೇಗೆಲ್ಲ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಬಗ್ಗೆ ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ರೇಣುಕಾಸ್ವಾಮಿ ಕೊಲೆ ಮರೆಮಾಚಲು ಭಾರಿ ಪ್ರಮಾಣದಲ್ಲಿ ಹಣ ಬಳಕೆಯಾಗಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿತ್ತು. ಪ್ರಕರಣದ ಇತರೆ ಆರೋಪಿಗಳಿಗೆ ದರ್ಶನ್‌ ಹಣ ಕೊಟ್ಟಿದ್ದಕ್ಕೆ ಪುರಾವೆ ಸಿಕ್ಕಿತ್ತು. ಅಲ್ಲದೆ, ಪೊಲೀಸರು 85 ಲಕ್ಷ ರೂ.ಗೂ ಹೆಚ್ಚು ಹಣ ಜಪ್ತಿ ಮಾಡಿದ್ದರು. ಈ ಹಣದ ಮೂಲದ ಬಗ್ಗೆ ತನಿಖೆ ಮಾಡಲು ಮತ್ತು ದರ್ಶನ್‌ರ ಮನೆ ಮೇಲೆ ದಾಳಿ ನಡೆಸಲು ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ನ್ಯಾಯಾಲಯದ ಅನುಮತಿ ಕೋರಿದ್ದರು. ಇದಕ್ಕೆ 24ನೇ ಎಸಿಎಂಎಂ ಕೋರ್ಟ್‌ ಅನುಮತಿ ನೀಡಿದೆ. ಇದರ ಬೆನ್ನಲ್ಲೇ ಐಟಿ ಅಧಿಕಾರಿಗಳು ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ಗೆ ನೋಟಿಸ್‌ ಜಾರಿ ಮಾಡಿದ್ದರು.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಕೋರಿ ನಟ ದರ್ಶನ್ ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದ್ದು, ಅದರ ವಿಚಾರಣೆ ಇದೇ ಸೆಪ್ಟೆಂಬರ್ 27ರಂದು ಕೋರ್ಟ್​ನಲ್ಲಿ ನಡೆಯಲಿದೆ.

WhatsApp Group Join Now
Telegram Group Join Now
Share This Article