ಮುದ್ದೇಬಿಹಾಳ,ಆ.೧೮: ಹಾಸ್ಟೇಲ್ ಮಕ್ಕಳಲ್ಲಿ ಶೈಕ್ಷಣಿಕ ವಾತಾವರಣ ಬೆಳೆಸುವ ಮತ್ತು ಲಭ್ಯವಿರುವ ಸೌಲಭ್ಯಗಳ ಪ್ರಾಯೋಗಿಕ ಪರಿಶೀಲನೆ ನಡೆಸುವ ಅವಕಾಶವನ್ನು ವಸತಿ ನಿಲಯದಲ್ಲಿ ಅಧಿಕಾರಿಗಳ ವಾಸ್ತವ್ಯ ಒದಗಿಸಿಕೊಡುತ್ತದೆ. ಇದು ಸಮಾಜ ಕಲ್ಯಾಣ ಇಲಾಖೆಯ ವಿನೂತನ ವ್ಯವಸ್ಥೆಯಾಗಿದ್ದು ಕುಂದು ಕೊರತೆ ಸರಿಪಡಿಸಲು ಅವಕಾಶ ಕಲ್ಪಿಸಿಕೊಡುತ್ತದೆ ಎಂದು ಇಲಾಖೆಯ ಉಪನಿರ್ದೇಶಕರ ಕಚೇರಿಯ ಲೆಕ್ಕ ಅಧೀಕ್ಷಕರಾದ ಎಂ.ಜಿ.ಬಿರಾದಾರ ಹೇಳಿದರು.
ಇಲ್ಲಿನ ತಂಗಡಗಿ ರಸ್ತೆ ಪಕ್ಕ ಪಿಲೇಕೆಮ್ಮನಗರ ಬಡಾವಣೆಯಲ್ಲಿರುವ ಡಾ|ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಏರ್ಪಡಿಸಿದ್ದ ವಸತಿ ನಿಲಯದಲ್ಲಿ ಅಧಿಕಾರಿಗಳ ವಾಸ್ತವ್ಯ ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಮಹಾತ್ಮಾ ಗಾಂಧೀಜಿ, ಡಾ.ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಇದೊಂದು ವಿನೂತನ ಕಾರ್ಯಕ್ರಮವಾಗಿದೆ. ನಿಲಯದ ಮಕ್ಕಳಲ್ಲಿ ಧೈರ್ಯ ತುಂಬಲು, ಸ್ಪರ್ಧಾ ಮನೋಭಾವ ಬೆಳೆಸಲು, ಸಾಧಿಸುವ ಗುಣ ಬೆಳೆಸಿಕೊಳ್ಳಲು ಮತ್ತು ಕೆಎಸ್, ಐಎಎಸ್‌ನಂತರ ಉನ್ನತಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಲು ಈ ಯೋಜನೆ ಮಹತ್ವದ್ದಾಗಿದೆ. ಮಕ್ಕಳೊಂದಿಗೆ ವಾಸ್ತವ್ಯ ನಡೆಸಿದರೆ ಅವರ ಸಮಸ್ಯೆಗಳನ್ನು ಅರಿತುಕೊಂಡು ಪರಿಹಾರೋಪಾಯ ಸುಲಭವಾಗಲಿದೆ ಎನ್ನುವ ಸದುದ್ದೇಶ ಇದರ ಹಿಂದಿದೆ ಎಂದರು.
ಹಿರಿಯ ವಾರ್ಡನ್ ಎಸ್.ಜಿ.ವಾಲಿಕಾರ ಅವರು ಮಾತನಾಡಿ ಹಾಸ್ಟೇಲ್‌ನಲ್ಲಿರುವ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಇದು ಅವರಿಗೆ ಉತ್ತಮ ಸೌಕರ್ಯ, ತರಬೇತಿ ದೊರಕುತ್ತಿದೆ ಎನ್ನುವುದಕ್ಕೆ ಉದಾಹರಣೆಯಾಗಿದೆ. ಯಾರೂ ದಡ್ಡರಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು. ಪ್ರಯತ್ನಕ್ಕೆ ಫಲ ಇದ್ದೇ ಇದೆ ಎನ್ನುವುದನ್ನು ಅರಿತು ಮುನ್ನುಗ್ಗಬೇಕು. ಇಲಾಖೆಯ ಈ ಯೋಜನೆ ಮಕ್ಕಳಿಗೆ ಹೆಚ್ಚು ಅನುಕೂಲ ಕಲ್ಪಿಸುವಂಥದ್ದಾಗಿದೆ ಎಂದರು.
ತಾಪಂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ ಅವರು ಮಾತನಾಡಿ ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಓದುವುದೊಂದೇ ಗುರಿಯಾಗಿರಬೇಕು. ಇಲಾಖೆ ಕೊಡುವ ಸೌಲಭ್ಯಗಳನ್ನು ಬಳಸಿಕೊಂಡು ಸಾಧನೆ ಮಾಡಿ ತೋರಿಸಬೇಕು. ನಿಮ್ಮಲ್ಲಿರುವ ಪ್ರತಿಭೆಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಹಾಯಕ ನಿರ್ದೇಶಕ ಬಸಂತಿ ಮಠ ಅವರು ಮಾತನಾಡಿ, ಪ್ರತಿ ತಿಂಗಳ ಮೂರನೇ ಶುಕ್ರವಾರ ಅಧಿಕಾರಿಗಳು ಯಾವುದಾರರೊಂದು ಹಾಸ್ಟೇಲ್‌ನಲ್ಲಿ ವಾಸ್ತವ್ಯ ಮಾಡಿ ಅಲ್ಲಿನ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ತಿಳಿದುಕೊಳ್ಳಬೇಕು ಎಂದು ಇಲಾಖೆಯ ಕಮೀಷನರ್ ಅವರು ಹೊರಡಿಸಿರುವ ಆದೇಶವನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕಿದೆ. ಇದು ವಿದ್ಯಾರ್ಥಿಗಳ ಸೌಲಭ್ಯದ ಕುರಿತು ಪ್ರಾಯೋಗಿಕ ಪರಿಶೀಲನೆ ಜೊತೆಗೆ ಅವರ ಕುಂದುಕೊರತೆ ಸರಿಪಡಿಸಲು ಅವಕಾಶ ಒದಗಿಸಿಕೊಡುತ್ತದೆ. ಹಾಸ್ಟೇಲ್ ಮಕ್ಕಳಲ್ಲಿರುವ ಪ್ರತಿಭೆ ಹೊರತರುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದರು.
ಕ್ರೈಸ್‌ನ ಜಮ್ಮಲದಿನ್ನಿಯ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ನೀಲಪ್ಪ ಕೊಡಬಾಗಿ, ಸಹಾಯಕ ನಿರ್ದೇಶಕರ ಕಚೇರಿ ಅಧೀಕ್ಷಕ ಶಿವಲಿಂಗ ಹಡಪದ, ಎಸ್‌ಡಿಎ ಯೋಗೀಶ ನಾಯಕ, ಸಂಜು ಲಮಾಣಿ, ವಾರ್ಡನ್‌ಗಳಾದ ಎಸ್.ಎಂ.ಭಾಸಗಿ, ನಾಗರಾಜ ಗುಡಗುಂಟಿ, ಎಸ್.ಎಂ.ಕಲಬುರ್ಗಿ, ಎಸ್.ಎಂ.ಸಲಗರ, ಗೌತಮ್ ತಳವಾರ ಇನ್ನಿತರರು ಅತಿಥಿಗಳಾಗಿದ್ದರು.
ಎಸ್.ಜಿ.ವಾಲಿಕಾರ ಸ್ವಾಗತಿಸಿದರು. ಮಹಾಂತೇಶ ತಾಳಿಕೋಟಿ ನಿರೂಪಿಸಿದರು. ಎಸ್.ವಿ.ಕೋರಿ ವಂದಿಸಿದರು.
ಶುಕ್ರವಾರ ಸಂಜೆ ವಸತಿ ನಿಲಯದಲ್ಲಿಯೇ ವಾಸ್ತವ್ಯ ಮಾಡಿದ ಅಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಅಲ್ಲಿಯೇ ತಯಾರಿಸುವ ಅಲ್ಪೋಪಹಾರ, ಊಟ ಸೇವಿಸಿದರು. ವೇದಿಕೆ ಕಾರ್ಯಕ್ರಮ ನಡೆಸಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಗುಣಮಟ್ಟ ಹೆಚ್ಚಿಸುವ ಮಾರ್ಗದರ್ಶನ ನೀಡಿದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಸನ್ಮಾನಿಸಿ ಪ್ರೋತ್ಸಾಹಿಸಿದರು. ರಾತ್ರಿ ಮಲಗುವುದಕ್ಕೂ ಮುನ್ನ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದರು. ಮರುದಿನ ಶನಿವಾರ ವಿದ್ಯಾರ್ಥಿಗಳೊಂದಿಗೆ ಬೆಳಗಿನ ಉಪಹಾರ ಸೇವಿಸಿ ವಿದ್ಯಾರ್ಥಿಗಳೊಂದಿಗೆ ಸೇರಿ ಸ್ವಚ್ಛತಾ ಕಾರ್ಯ ನಡೆಸಿ ಎಲ್ಲರಿಗೂ ಸ್ವಚ್ಛತೆಯ ಪರಿಕಲ್ಪನೆ ಮೂಡಿಸಿದರು.