ಅಧಿಕಾರಿಗಳು ಜನಪರ ಆಡಳಿತ ಸೇವೆ ನೀಡಬೇಕು: ಸಚಿವ ಜಮೀರ್ ಅಹ್ಮದ್ ಖಾನ್

Ravi Talawar
ಅಧಿಕಾರಿಗಳು ಜನಪರ ಆಡಳಿತ ಸೇವೆ ನೀಡಬೇಕು: ಸಚಿವ ಜಮೀರ್ ಅಹ್ಮದ್ ಖಾನ್
WhatsApp Group Join Now
Telegram Group Join Now
ಬಳ್ಳಾರಿ: ಜಿಲ್ಲಾ ತ್ರೈಮಾಸಿಕ ಕೆಡಿಪಿ ಸಭೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಸೂಚನೆ
ಅಧಿಕಾರಿಗಳು ಜನಪರ ಆಡಳಿತ ಸೇವೆ ನೀಡಬೇಕು

ಬಳ್ಳಾರಿ,ಸೆ.30.
ಜಿಲ್ಲಾಮಟ್ಟದ ಅಧಿಕಾರಿಗಳು ಜನಪರ ಆಡಳಿತ ಸೇವೆ ನೀಡಬೇಕು. ಈ ಮೂಲಕ ಸರ್ಕಾರಕ್ಕೆ ಕೀರ್ತಿ ತರಬೇಕು ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಹೇಳಿದರು.
ಸೋಮವಾರ, ನಗರದ ಜಿಲ್ಲಾ ಪಂಚಾಯತ್ ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾ ಮೊದಲ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಶೇ.96.95 ರಷ್ಟು ಅನುಷ್ಠಾನವಾಗಿದ್ದು, ನೂರಕ್ಕೆ ನೂರರಷ್ಟು ಅನುಷ್ಠಾನವಾಗಬೇಕು ಎಂದು ಹೇಳಿದರು.
*ಯುವಕರಿಗೆ ಉದ್ಯೋಗವೂ ಕಲ್ಪಿಸಿ:*
ರಾಜ್ಯ ಸರ್ಕಾರ ನಿರುದ್ಯೋಗ ಯುವಕ-ಯುವತಿಯರಿಗೆ ಯುವನಿಧಿ ಯೋಜನೆಯಡಿ ಸಹಾಯಧನವೂ ನೀಡುತ್ತಿದೆ. ಇವರಿಗೆ ಖಾಸಗಿ ವಲಯಗಳಲ್ಲಿ ಉದ್ಯೋಗ ಹೊಂದಲು ಕಾಲ-ಕಾಲಕ್ಕೆ ಉದ್ಯೋಗ ಮೇಳ ಆಯೋಜಿಸುವ ಮೂಲಕ ಉದ್ಯೋಗ ಕಲ್ಪಿಸಬೇಕು. ಹೊಸದಾಗಿ ನೋಂದಾಯಿಸಿಕೊಳ್ಳುವ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆ ವಿಳಂಬವಾಗುತ್ತಿದ್ದು, ಪ್ರಕ್ರಿಯೆಗೆ ವೇಗ ನೀಡಬೇಕು ಎಂದು ಜಿಲ್ಲಾ ಉದ್ಯೋಗಾಧಿಕಾರಿಗೆ ನಿರ್ದೇಶನ ನೀಡಿದರು.
*ಅಕ್ರಮ ಪಡಿತರ ಸಾಗಾಣಿಕೆಗೆ ಕಡಿವಾಣ ಹಾಕಿ:*
ನಮ್ಮ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಅನ್ನಭಾಗ್ಯ ಯೋಜನೆಯಡಿ
10 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿರುವ ಪ್ರಕರಣಗಳು ಪತ್ರಿಕೆಗಳಲ್ಲಿ ವರದಿಯಾಗುತ್ತಿದ್ದು, ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
*ಬಸ್ ಬೇಡಿಕೆ ಇದ್ದಲ್ಲಿ ಪ್ರಸ್ತಾವನೆ ಸಲ್ಲಿಸಿ:*
ನಮ್ಮ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆ ‘ಶಕ್ತಿ ಯೋಜನೆ’ಯಡಿ ಮಹಿಳೆಯರು ಉಚಿತವಾಗಿ ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇದರ ಜೊತೆಗೆ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಮನವಿಗಳು ಸಲ್ಲಿಕೆಯಾಗುತ್ತಿದ್ದು, ಈ ಕುರಿತು ಬಸ್ ಗಳ ಬೇಡಿಕೆ ಇದ್ದಲ್ಲಿ ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಿಗೆ ಹೇಳಿದರು.
*ಕೆಕೆಆರ್ ಟಿಸಿ ಡಿಸಿ ಅಮಾನತು:*
ಕೆಡಿಪಿ ಸಭೆಯಲ್ಲಿ ಶಕ್ತಿ ಯೋಜನೆಗೆ ಸಂಬಂಧಿಸಿದಂತೆ, ಪೂರಕ ಮಾಹಿತಿ ನೀಡದೇ ಇರುವುದು ಮತ್ತು ಸಭೆಗೆ ಗೈರಾಗಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಮಳೆಯ ಕೊರತೆಯಿಲ್ಲ, ಅದೇರೀತಿಯಾಗಿ ನಿಗದಿತ ಗುರಿಗಿಂತ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ರಸಗೊಬ್ಬರದ ಕೊರತೆ ಇರುವುದಿಲ್ಲ ಎಂದು ಕೃಷಿ ಅಧಿಕಾರಿಗಳು ಸಭೆಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಜೆಲ್ಲೆಯ ಎಲ್ಲಾ ತಾಲ್ಲೂಕು ವ್ಯಾಪ್ತಿಯಲ್ಲಿ ರಸಗೊಬ್ಬರ ಪೂರೈಕೆಯಾಗಬೇಕು. ರೈತರಿಗೆ ಬೆಳೆ ವಿಮೆಗೆ ನೋಂದಾಯಿಸಲು ಸೂಚಿಸಬೇಕು. ಬರುವ ಹಿಂಗಾರು ಮತ್ತು ಮುಂಗಾರು ಜೋಳ ಖರೀದಿ ಪ್ರಕ್ರಿಯೆಯಲ್ಲಿ ಅವ್ಯವಹಾರವಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
*ಮಹಾನಗರ ಪಾಲಿಕೆ ಹಳೆಯ ತಾಲ್ಲೂಕು ಕಚೇರಿ ಆವರಣಕ್ಕೆ ಸ್ಥಳಾಂತರ:*
ಸುಮಾರು 30 ವರ್ಷಗಳ ಹಳೆಯ ಕಟ್ಟಡವಾದ ಬಳ್ಳಾರಿ ಮಹಾನಗರ ಪಾಲಿಕೆ ಕಚೇರಿಯನ್ನು 2.50 ಎಕರೆ ಪ್ರದೇಶವಿರುವ ನಗರದ ಹಳೆಯ ತಾಲ್ಲೂಕು ಕಚೇರಿ ಆವರಣದಲ್ಲಿ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಮಾದರಿಯ ಸುಸಜ್ಜಿತ ಪಾಲಿಕೆ ಕಚೇರಿ ನಿರ್ಮಾಣ ಮಾಡಲಾಗುವುದು ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಹೇಳಿದರು. ಇದಕ್ಕೆ ಜಾಗ ಒದಗಿಸಿಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾಪಿದರು. ಹಳೆಯ ಪಾಲಿಕೆ ಕಚೇರಿ ಜಾಗದಲ್ಲಿ ವಾಣಿಜ್ಯ-ವ್ಯಾಪಾರ ಮಳಿಗೆಗಳನ್ನು ನಿರ್ಮಿಸಲಾಗುವುದು. ಹಳೆಯ ಕಚೇರಿ ಆವರಣದಲ್ಲಿರುವ ಪೊಲೀಸ್ ಠಾಣೆ, ಕೃಷಿ ಮತ್ತು ತೋಟಗಾರಿಕೆ ಕಚೇರಿಗಳನ್ನು ನೂತನ ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರಿಸಲಾಗುವುದು ಎಂದರು.
*ಆಸ್ಪತ್ರೆಗಳಲ್ಲಿ ಸೌಜನ್ಯದಿಂದ ವರ್ತಿಸಿ:*
ಕಳೆದ ವರ್ಷ ಜಿಲ್ಲೆಯಲ್ಲಿ ಸಂಭವಿಸಿದ ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಸರ್ಕಾರಿ ಆಸ್ಪತೆಗಳಿಗೆ ಸಾರ್ವಜನಿಕರು ಬರಲು ಭಯಭೀತರಾಗುತ್ತಿದ್ದಾರೆ. ಸರ್ಕಾರಿ ಆಸ್ಪತೆಗಳಲ್ಲಿ ಜನನ ಪ್ರಮಾಣವೂ ಕುಂಠಿತಗೊಂಡಿದೆ. ಹಾಗಾಗಿ ವೈದ್ಯಾಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ, ಜನಸಾಮಾನ್ಯರಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು. ಶಾಸಕರ ಕರೆಗಳಿಗೆ ಸ್ಪಂದಿಸಬೇಕು ಎಂದು ಸಚಿವರು ಹೇಳಿದರು.
ಜಿಲ್ಲೆಯಲ್ಲಿ ಪ್ರಭಾವಿಗಳಿಂದಲೇ ಸರ್ಕಾರಿ ಭೂಮಿ ಒತ್ತುವರಿಯಾಗುತ್ತಿದ್ದು, ಈ ಕುರಿತು ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ ಸಚಿವ ಜಮೀರ್ ಅಹ್ಮದ್ ಖಾನ್ ಅವರು, ನೆರೆಯ ರಾಜ್ಯದಿಂದ ಅಕ್ರಮವಾಗಿ ಸರಬರಾಜಾಗುವ ಸೇಂಧಿ, ಮದ್ಯ ಮತ್ತು ಗಾಂಜಾ, ಮಟ್ಕಾ, ಜೂಜು, ಬೆಟ್ಟಿಂಗ್ ದಂಧೆಗಳಿಗೆ ಕಡಿವಾಣ ಹಾಕಬೇಕು ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಮೆಗಾಡೈರಿ ನಿರ್ಮಾಣಕ್ಕೆ ಸ್ಥಳ ಗುರುತಾಗಿದ್ದು, ಬೇಕಾದ ಅಗತ್ಯ ಎಲ್ಲಾ ಸೌಲಭ್ಯ ಕಲ್ಪಿಸಲಾಗುತ್ತಿದೆ. ಹಾಲು ಉತ್ಪಾದನೆ ಹೆಚ್ಚಳಕ್ಕೆ ಕೆಎಂಎಫ್ ಅಧಿಕಾರಿಗಳು ಕ್ರಮ ವಹಿಸಬೇಕು. ಶಾಲೆಗಳ ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್ ವಿತರಣೆಯಾಗಿದೆಯೇ ಎಂಬುದರ ಕುರಿತು ಮೇಲ್ವಿಚಾರಣೆ ನಡೆಸಬೇಕು. ಎಸ್.ಎಸ್.ಎಲ್.ಸಿ ಮತ್ತು ಪಿಯು ಫಲಿತಾಂಶ ಹೆಚ್ಚಳಕ್ಕೆ ಜಿಲ್ಲೆಯನ್ನು ಮೊದಲ ಕ್ರಮಾಂಕದಲ್ಲಿ ಮುಂಚೂಣಿಯಲ್ಲಿರಿಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕಿದೆ ಎಂದರು.
ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ಪ್ರಗತಿ ಕುರಿತಂತೆ ಪರಿಶೀಲಿಸಿದ ಸಚಿವರು, ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದರು. ಈ ವಾರಕ್ಕೆ ಬಳ್ಳಾರಿ ಜಿಲ್ಲೆಯು 18 ನೇ ಸ್ಥಾನದಲ್ಲಿದೆ ಎಂದರು.
ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಗಳು, ವಸತಿನಿಲಯ ಕಟ್ಟಡಗಳ ಸ್ಥಿತಿ-ಗತಿ ಕುರಿತು ಸಚಿವರು ಚರ್ಚಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಹಾಗೂ ಶಾಸಕ ಜೆ.ಎನ್ ಗಣೇಶ್, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕ ಚಂದ್ರ, ಬಳ್ಳಾರಿ ವಲಯ ಐಜಿಪಿ ವರ್ತಿಕಾ ಕಟಿಯಾರ್, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ., ಉಪಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್.ಬಸವರಾಜ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲ್ಲೂಕು ತಹಶೀಲ್ದಾರರು, ತಾಪಂ ಇಓ ಅಧಿಕಾರಿಗಳು ಉಪಸ್ಥಿತರಿದ್ದರ

WhatsApp Group Join Now
Telegram Group Join Now
Share This Article